ಪುತ್ತೂರು: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಯ ಮೂಲಕ ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ನೀಡಿ ಸಮಾಜದಲ್ಲಿ ಹೆಣ್ಣು ಮಕ್ಕಳು ಗೌರವದಿಂದ ಬದುಕುವಂತೆ ಮಾಡಬೇಕಾಗಿದೆ ಎಂದು ಆಗ್ರಹಿಸಿ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸಹಾಯಕ ಆಯುಕ್ತರ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಬೆಳ್ತಂಗಡಿ ತಾಲೂಕಿನಲ್ಲಿ ಉಜಿರೆಯಲ್ಲಿ 2011 ರಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ನ್ಯಾಯಾಲಯ ನಿರಪರಾಧಿಯೆಂದು ನ್ಯಾಯಾಲಯ ಘೋಷಿಸಿದ್ದು, ನೈಜ ಆರೋಪಿಗಳು ಯಾರೆಂದು ಇದುವರೆಗೂ ಪತ್ತೆಯಾಗಿಲ್ಲ. ತನಿಖೆ ಹಂತದಲ್ಲಿ ಯಾವುದೋ ಒತ್ತಡದಲ್ಲಿ ತನಿಖಾಧಿಖಾರಿಗಳು ಸಾಕ್ಷಿ, ದಾಖಲೆಗಳನ್ನು ಒದಗಿಸುವಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಡಿರುವುದು ಕಂಡು ಬಂದಿದೆ.
ನಿಜವಾದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈ ಕುರಿತು ಮೃತರ ಸಂಬಂಧಿಗಳು ಆರೋಪಿಗಳ ಹೆಸರುಗಳನ್ನು ನೇರವಾಗಿ ಉಲ್ಲೇಖ ಮಾಡಿದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಓರ್ವ ನಿರಪರಾಧಿಯ ಹೆಸರನ್ನು ಸೇರಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದೇ ಮುಂದುವರಿದಲ್ಲಿ ಇಂತಹಾ ಅಮಾನವೀಯ ಘಟನೆಗಳು ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮನವಿ ನೀಡುವ ಸಂದರ್ಭ ತಾಲೂಕು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಸತೀಶ್ ಪಾಂಬಾರು, ಪದಾಧಿಕಾರಿಗಳಾದ ವಸಂತ ವೀರಮಂಗಲ, ಶ್ರೀಧರ ಗೌಡ ಕಣಜಾಲು, ತೀರ್ಥರಾಮ ಕೆಡೆಂಜಿ, ಉಮೇಶ್, ಸೂರಪ್ಪ, ಮೋಹನ್ ಗೌಡ, ದಯಾನಂದ ಕೆ.ಎಸ್, ಲಿಂಗಪ್ಪ ಗೌಡ ತೆಂಕಿಲ, ಸುರೇಶ್ ಗೌಡ ಕಲ್ಲಾರೆ, ಸೂರಪ್ಪ ಗೌಡ, ಮತ್ತಿತರರು ಉಪಸ್ಥಿತರಿದ್ದರು.