ಪುತ್ತೂರು: ನಾವು ವಿದ್ಯೆ ಕಲಿತು ಎಷ್ಟೇ ದೊಡ್ಡ ಉನ್ನತ ಪದವಿ ಪಡೆದು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಬಹುದು. ಆದರೆ ನಮಗೆ ನಮ್ಮ ತಂದೆ ತಾಯಿಯ ಆಶೀರ್ವಾದ ಇಲ್ಲದೇ ಇದ್ದರೆ ನಾವು ಶೂನ್ಯ ವ್ಯಕ್ತಿಗಳಾಗುತ್ತೇವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಸಾಲ್ಮರ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಹಾಗೂ ಪೌಢ ಶಾಲೆಯಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶನ ಮಾಡಬೇಕು, ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಚಿಂತೆಯನ್ನು ಬಿಟ್ಟು ಬಿಡಬೇಕು, ಉನ್ನತ ಶಿಕ್ಷಣದತ್ತ ನಾವು ನಿತ್ಯವೂ ಕನಸು ಕಾಣುವವರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನ್ಯಾಯವಾದಿ ನೂರುದ್ದೀನ್ ಸಾಲ್ಮರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಕೆ ಪಿ ಅಹ್ಮದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಎಂ, ಟ್ರಸ್ಟಿ ಅಬ್ದುಲ್ಲ ಹಾಜಿ ಯು, ಉಪ್ಪಳಿಗೆ ಶಾಲೆಯ ನಿವೃತ್ತ ಶಿಕ್ಷಕ ನಾರಾಯಣ, ಸಾಲ್ಮರ ಮೌಂಟನ್ ವ್ಯೂ ಶಾಲೆಯ ಮುಖ್ಯ ಶಿಕ್ಷಕಿ ಮೋಹನಾಂಗಿ ಎನ್ ಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡ ಪೂರ್ವ ಶಿಕ್ಷಣ ಕೊಠಡಿಯನ್ನು ಶಾಸಕರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ವತಿಯಿಂದ ಶಾಸಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸಹಶಿಕ್ಷಕ ಮಂಜುನಾಥ ರೈ ಶಾಸಕರ ಪರಿಚಯ ಮಾಡಿದರು. ಕಾರ್ಯದರ್ಶಿ ಅಬ್ದುಲ್‌ರಹಿಮಾನ್ ಆಝಾದ್ ಸ್ವಾಗತಿಸಿದರು. ಸಹಶಿಕ್ಷಕ ರವೂಫ್ ಎ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.