ಎಡನೀರಿನಲ್ಲಿ ಹಿರಿಯರ ಸಮಾವೇಶ, ಕಲಾವಿದರಿಗೆ ಸನ್ಮಾನ

ಎಡನೀರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನವು ಕಳೆದೆರಡು ವರ್ಷಗಳಿಂದ ನಡೆಸುತ್ತಿರುವ  ಸೇವಾ ಚಟುವಟಿಕೆಗಳು ಉದಾತ್ತ  ಭಾವನೆಯಿಂದ ಕೂಡಿದ್ದು ಸಮಾಜಕ್ಕೆ ಧೈರ್ಯವನ್ನು ತುಂಬುವ ಕಾರ್ಯವನ್ನು ಮಾಡುತ್ತಿದೆ. ಪರಿಪಕ್ವ ಮನಸ್ಸಿನ ಹಿರಿಯರು ಸಮಾಜಕ್ಕೆ ಮತ್ತು ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡುವ ಎಲ್ಲಾ ಕಾರ್ಯಕ್ರಮಗಳಿಗೆ ಮಠದಿಂದ ಸದಾ ಪ್ರೋತ್ಸಾಹವಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ತಿಳಿಸಿದರು.

ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಮಠದ ಸಹಯೋಗದಲ್ಲಿ ಚಾತುರ್ಮಾಸ್ಯ ಸಭಾಂಗಣದಲ್ಲಿ ಜರಗಿದ ಹಿರಿಯರ ಸಮಾವೇಶ ಮತ್ತು ಕಲಾವಿದರ ಸನ್ಮಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ.ಶಾಮ್ ಭಟ್ ಮಾತನಾಡಿ, ಹಿರಿಯರ ಸೇವಾ ಪ್ರತಿಷ್ಠಾನದ ಸದಸ್ಯರ ಸಂಖ್ಯೆ ಇನ್ನಷ್ಟು ಹೆಚ್ಚಾಗಿ ಸೇವಾ ಕಾರ್ಯಗಳು ನಿರಂತರವಾಗಿ ಜರಗಲಿ ಎಂದು ಶುಭ ಹಾರೈಸಿದರು.































 
 

ವಿದ್ವಾನ್ ಪಂಜ ಭಾಸ್ಕರ ಭಟ್ ಶ್ರೀ ಶಂಕರ ಭಗವತ್ಪಾದರ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಭಾರತ ದೇಶದ ಐಕ್ಯತೆಯ ಬಗ್ಗೆ ಅವರ ಕೊಡುಗೆಗಳನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಾವೇರಿ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಕೆ ಚಿನ್ನಪ್ಪ ಗೌಡ ಮಾತನಾಡಿ, ಸಾಮಾಜಿಕ ಸಂಬಂಧಗಳು ಛಿದ್ರವಾಗುತ್ತಿರುವ ಇಂದಿನ ದಿನದಲ್ಲಿ ಜನರ ನೈತಿಕ ಮೌಲ್ಯವನ್ನು ಹೆಚ್ಚಿಸುವಲ್ಲಿ ಮಠಗಳು ಮತ್ತು ಹಿರಿಯರ ಸೇವಾ ಪ್ರತಿಷ್ಠಾನದಂತಹ ಸಂಸ್ಥೆಗಳು ಮುಂದಾಗಬೇಕಾಗಿದೆ ಎಂದರು.

ಹಿರಿಯ ಯಕ್ಷಗಾನ  ಸಾಧಕ ಕಲಾವಿದರಾದ ಪೆರುವೋಡಿ ನಾರಾಯಣ ಭಟ್ ,ಪಾತಾಳ ವೆಂಕಟರಮಣ ಭಟ್ ಮತ್ತು ಅರುವ ಕೊರಗಪ್ಪ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಹಿರಿಯರ ಪ್ರತಿಷ್ಠಾನದಿಂದ ಗೌರವಿಸಲಾಯಿತು. ಸನ್ಮಾನಕ್ಕೆ ಅರುವ ಕೊರಗಪ್ಪ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು. ಪುತ್ತೂರು ಘಟಕದ  ಭವಾನಿ ಶಂಕರ ರೈ ಅವರು ಕೊಡ ಮಾಡಿದ ಮುಕ್ತಿ ವಾಹಿನಿ ನಿಧಿಯನ್ನು ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪ್ರೊ. ಎ .ವಿ ನಾರಾಯಣ ಇವರಿಗೆ ಸ್ವಾಮೀಜಿಯವರು ಹಸ್ತಾಂತರಿಸಿದರು. ಮಂಗಳೂರು ಘಟಕದ ಭರತ್. ಕೆ ಅವರು ಹಸ್ತಾಕ್ಷರದಲ್ಲಿ ಬರೆದ 400 ಕ್ಕಿಂತಲೂ ಹೆಚ್ಚು ಭಜನೆ ಪುಸ್ತಕವನ್ನು ಸ್ವಾಮೀಜಿಯವರಿಗೆ ಗೌರವ ಪೂರ್ವಕವಾಗಿ ಅರ್ಪಿಸಿದರು.ಪ್ರತಿಷ್ಠಾನದ ಉಪಾಧ್ಯಕ್ಷ ದುಗ್ಗಪ್ಪ . ಎನ್, ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ಞಿ ಮತ್ತು ಪ್ರೊ .ವೇದವ್ಯಾಸ ರಾಮಕುಂಜ ಸನ್ಮಾನ ಪತ್ರ ವಾಚಿಸಿದರು. ಚಂದ್ರಶೇಖರ ಆಳ್ವ ಪಡುಮಲೆ, ಉದಯಶಂಕರರ ರೈ ಪುಣಚ ,ರಾಮಕೃಷ್ಣ ನಾಯಕ್ ಸಹಕರಿಸಿದರು.

ಪ್ರತಿಷ್ಠಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿವಾಕರ್ ಆಚಾರ್ಯ ಗೇರುಕಟ್ಟೆ ವಂದಿಸಿದರು. ಸಹ ಕಾರ್ಯದರ್ಶಿ ಡಾ .ಬಿ . ಎನ್ ಮಹಾಲಿಂಗ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಬೊಳುವಾರು ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿ ಬೊಳುವಾರು ಪುತ್ತೂರು ಇವರಿಂದ ಭಜನಾ ಸಂಕೀರ್ತನೆ ಜರಗಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top