ಪುತ್ತೂರು: ಪುತ್ತೂರು ತಾಲೂಕಿನ ಮಾಡಾವು ಪಾಲ್ತಾಡಿ ಗ್ರಾಮದ ಧರ್ಮರಸು ಉಳ್ಳಾಕುಲು ದೈವಸ್ಥಾನದ ಮಣ್ಣಿನಲ್ಲಿ ಪ್ರಥಮ ಬಾರಿಗೆ ಎಂಬಂತೆ ಕೆಸರ್ ಡೊಂಜಿ ದಿನ ಕಂಬಳ ಉತ್ಸವ ಹಾಗೂ ರಕ್ತದಾನ ಶಿಬಿರ ಭಾನುವಾರ ಮೇಳೈಸಿತು. ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಇದಕ್ಕೆ ಸಾಕ್ಷಿಯಾದರು.
ಸಾರಾಕರೆ ದಿ.ಶೀನಪ್ಪ ಪೂಜಾರಿ ಅವರ ಸ್ಮರಣಾರ್ಥ ನಡೆದ ಕೆಸರ್ ಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾನುವಾರ ಮುಂಜಾನೆಯಿಂದಲೇ ಮಕ್ಕಳು, ಮಹಿಳೆಯರು, ಪುರುಷರು ಎನ್ನದೆ ಎಲ್ಲರೂ ಸೇರಿದ್ದರು. ಈ ಕೆಸರುಗದ್ದೆ ಕ್ರೀಡಾಕೂಟ, ಕಂಬಳ ಕ್ರೀಡಾ ಸ್ಪರ್ಧೆಗಾಗಿ ದೈವಸ್ಥಾನದ ಗದ್ದೆಯನ್ನು ಅಣಿಗೊಳಿಸಲಾಗಿತ್ತು. ಬೆಳಗ್ಗೆಯಿಂದ ಮಕ್ಕಳಿಗಾಗಿ ಏರ್ಪಡಿಸಿದ ಕೆಸರುಗದ್ದೆ ಓಟ, ಹಿಮ್ಮುಖ ಓಟ, ಹಾಳೆ ಎಳೆತ, ಡೊಂಕ ಓಟ, ನಿಧಿ ಶೋಧನೆ, ಬುಗರಿ ಆಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಬಳಿಕ ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಮಡಕೆ ಒಡೆಯುವುದು, ಪುರುಷರಿಗಾಗಿ ವಾಲಿಬಾಲ್, ಹಗ್ಗಜಗ್ಗಾಟ, ಕಬಡ್ಡಿ ಪಂದ್ಯಾಟಗಳು ಸಂಜೆ ತನಕ ನಡೆದವು. ವಿಶೇಷವಾಗಿ ಕೋಣಗಳು ಭಾಗವಹಿಸುವ ಮೂಲಕ ಕಂಬಳ ಕ್ರೀಡಾಕೂಟವು ನೆರೆದಿದ್ದವರನ್ನು ಮುದಗೊಳಿಸಿತು. ಅಲ್ಲದೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವೂ ಕಾರ್ಯಕ್ರಮಕ್ಕೆ ಮೆರುಗು ನೀಡಿತು.ಒಟ್ಟಾರೆಯಾಗಿ ಕಾರ್ಯಕ್ರಮ ಮುಂದಿನ ತಲೆಮಾರಿಗೆ ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂತು.
ಉದ್ಘಾಟನೆ : ಸವಣೂರು ಗ್ರಾಪಂ ಅಧ್ಯಕ್ಷೆ ಕೆ.ವಿ.ರಾಜೀವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಕೆಸರುಗದ್ದೆ ಕ್ರೀಡಾಕೂಟವನ್ನು ಏರ್ಪಡಿಸುವ ಮೂಲಕ ಮತ್ತೊಮ್ಮೆ ಕ್ರೀಡಾಕೂಟದ ವೈಭವವನ್ನು ಮರುಕಳಿಸುವಂತೆ ಮಾಡಿದೆ. ಜತೆಗೆ ಮಾದರಿಯಾಗಿ ಕಂಬಳ, ರಕ್ತದಾನ ಶಿಬಿರ ನಡೆಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಮಾಡ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂಜೀವ ಗೌಡ ಮಾತನಾಡಿ, ಹಿಂದಿನ ಕಾಲದ ವೈಭವವನ್ನು ನೆನಪಿಸುವ ಕಾರ್ಯ ಇದೀಗ ಆಗಿದೆ. ಎಲ್ಲರಿಗೂ ಪ್ರೇರಣೆ ಎಂಬಂತೆ ಕಾರ್ಯಕ್ರಮ ಆಯೋಜಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಅಂತರಾಷ್ಟ್ರೀಯ ಕ್ರೀಡಾಪಟು ಅಶ್ವತ್ಥ್ ಕಣಿಯಾರು ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿದಾಗ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಈ ಕ್ರೀಡಾಕೂಟ ಮಾದರಿಯಾಗಿದೆ ಎಂದರು.
ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತಾರನಾಥ್ ಬೊಳಿಯಾಲ ಮಾತನಾಡಿ, ಪಾಲ್ತಾಡಿ ಗ್ರಾಪಂ ಮಾಜಿ ಅಧ್ಯಕ್ಷ ಕಿಟ್ಟಣ್ಣ ರೈ ನಡುಕೂಟೇಲ್, ಮನೋಜ್ ಕುಮಾರ್, ಸುಳ್ಯ ಅಮರ ಸಂಘಟನಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಲಾಲ್ ಶುಭ ಹಾರೈಸಿದರು.
ವಿಶೇಷ ಗೌರವಾರ್ಪಣೆ : ಈ ಸಂದರ್ಭದಲ್ಲಿ ಚೆನ್ನಾವರ ಶಾಲಾ ಮುಖ್ಯ ಶಿಕ್ಷಕ ಮಲ್ಲೇಶ್, ಅಂಕತಡ್ಕ ಶಾಲಾ ಮುಖ್ಯ ಶಿಕ್ಷಕ ಗಂಗಾಧರ ನಾಯ್ಕ ಎ., ಪಾಲ್ತಾಡಿ ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ರೈ ಪಿ.ಜಿ., ಮಣಿಕರ ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಅಂತರಾಷ್ಟ್ರೀಯ ಕ್ರೀಡಾಪಟು ರಾಜೀವಿ ಗೋಳ್ಪಾಡಿ, ಸುಳ್ಯ ಅಮರ ಸಂಘಟನಾ ಸಮಿತಿ ಸಂಚಾಲಕ ಹರ್ಷಿತ್ ಬಿ.ಜೆ., ಪ್ರಗತಿಪರ ಕೃಷಿಕ ಕಿಶೋರ್ ಕುಮಾರ್ ಅಗರಿಗುತ್ತು, ಹಿರಿಯ ಕೋಣ ಬಿಡುವವರಾದ ಗೋಪಾಲ ವೇಣೂರು, ಲತೀಫ್ ಗುರುವಾಯನಕೆರೆ ಹಾಗೂ ಯುವ ಕಂಬಳ ಓಟಗಾರ ಭವಿತ್ ಮರಕ್ಕುರ್ ಅವರಿಗೆ ಗೌರವಾರ್ಪಣೆ ನಡೆಯಿತು
ದಾಮೋದರ ಕೆಂಗುಡೇಲು ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕ ಲೋಹಿತ್ ಬಂಗೇರ ಬಾಲಯ ಅತಿಥಿಗಳನ್ನು ಶಾಲು ಹೊದಿಸಿ ಗೌರವಿಸಿದರು. ರೋಶನ್ ಬಂಗೇರಾ ಬಾಲಯ, ರೋಹಿತ್ ಬಂಗೇರಾ ಅಡಿಲು, ನಿತಿನ್ ಬಂಗೇರಾ ಅಭೀರ ಉಪಸ್ಥಿತರಿದ್ದರು. ಹರ್ಷಿತ್, ದಾಮೋದರ ಕೆಂಗುಡೇಲು, ಪ್ರವೀಣ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್, ತಿಂಗಳಾಡಿ ಬಾಲಯ ಕಂಬಳ ತಂಡ, ಸುಳ್ಯ ಅಮರ ಸಂಘಟನಾ ಸಮಿತಿ ಹಾಗೂ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.