ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇದರ ಗ್ರಾಮ ವಿಕಾಸ, ಇಕೋ ಕ್ಲಬ್ ಹಾಗೂ ಎನ್ ಎಸ್ ಎಸ್ ಸಹಯೋಗದಲ್ಲಿ ಸಸ್ಯ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ಔಷಧೀಯ ಸಸ್ಯಗಳನ್ನು ನೆಡುವ “ವಿವೇಕ ಸಂಜೀವಿನಿ” ಕಾರ್ಯಕ್ರಮ ಶಾಂತಿಗೋಡು ಶಾಲಾ ವಠಾದಲ್ಲಿ ಆ.11 ಶುಕ್ರವಾರ ನಡೆಯಿತು.

ಗ್ರಾಮ ವಿಕಾಸ ಸಮಿತಿ ಸದಸ್ಯ ಕೃಷ್ಣ ಸಾಲ್ಯಾನ್ ಮಾತನಾಡಿ, ಒಂದು ಮರದಿಂದ ವಿವಿಧ ರೀತಿಯ ಉಪಯೋಗ ಇದೆ. ಈ ನಿಟ್ಟಿನಲ್ಲಿ ವಿವಿಧ ಬಗೆಯ ಸಸ್ಯಗಳನ್ನು ನೆಟ್ಟು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಗ್ರಾಮ ವಿಕಾಸ ಸಮಿತಿ ಸದಸ್ಯ, ನ್ಯಾಯವಾದಿ ಶ್ಯಾಮ್ ಭಟ್ ಮಾತನಾಡಿ, ಮರಗಳಿಂದ ಆಗುವ ಉಪಯೋಗ ಮನುಷ್ಯರಿಂದ ಆಗುತ್ತಿಲ್ಲ. ಒಂದೊಂದು ರೀತಿಯ ಮರಗಳಿಂದ ಮನುಷ್ಯನ ಉಸಿರಾಟಕ್ಕೆ ಆಕ್ಸಿಜನ್ ದೊರೆಯುವುದರ ಜತೆಗೆ ಪ್ರಾಣಿ ಪಕ್ಷಿಗಳ ಆಶ್ರಯ ತಾಣವಾಗಿಯೂ ಉಪಯೋಗವಾಗಲಿದೆ.
ಗ್ರಾಮ ವಿಕಾಸ ಸಮಿತಿ ಸದಸ್ಯ ವಿನೋದ್ ಮಾತನಾಡಿ, ಶಾಂತಿಗೋಡು ಗ್ರಾಮವನ್ನು ದತ್ತು ಗ್ರಾಮವನ್ನಾಗಿ ಸ್ವೀಕರಿಸಿ ಶಾಂತಿಗೋಡಿನ ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲಾ ತರಹದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಹಕರಿಸುವಲ್ಲಿ ಗ್ರಾಮ ವಿಕಾಸ, ಎನ್ ಎಸ್ ಎಸ್ ಘಟಕ, ಇಕೋ ಕ್ಲಬ್ ಮೂಲಕ ಹಲವು ಕಾರ್ಯಕ್ರಮಗಳನ್ನು ಏಳು ವರ್ಷಗಳಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ನರಿಮೊಗರು ಗ್ರಾಪಂ ಉಪಾಧ್ಯಕ್ಷ ಸುಧಾಕರ್ ಕುಲಾಲ್, ಕಾರ್ಯಕ್ರಮ ಆಯೋಜಕ, ವಕೀಲ ಸುಧೀರ್ ಕುಮಾರ್ ತೋಲ್ಪಾಡಿ, ಶಾಂತಿಗೋಡು ಶಾಲಾ ಎಸ್‍ಡಿಎಂಸಿ ಉಪಾಧ್ಯಕ್ಷ ನಾಗೇಶ್ ಸಾರಕರೆ, ಪ್ರಭಾರ ಮುಖ್ಯ ಶಿಕ್ಷಕಿ ಸವಿತಾ ಕುಮಾರಿ, ಇಕೋ ಕ್ಲಬ್ ಸಂಯೋಜಕಿ ದಿಶಾ ಹಾಗೂ ತಿಲಕ್, ಗ್ರಾಮ ವಿಕಾಸ ಸಮಿತಿ ಸಂಯೋಜಕರಾದ ಲಕ್ಷ್ಮೀಕಾಂತ್, ನವೀನ್ ಕುಮಾರ್, ನರಿಮೊಗರು ಗ್ರಾಪಂ ಗ್ರಂಥಪಾಲಕ ವರುಣ್ ಕುಮಾರ್ ಉಪಸ್ಥಿತರಿದ್ದರು.