ಪುತ್ತೂರು : ಸಮಾಜದ ಪರಿವರ್ತನೆ ಜತೆ ಇತಿಹಾಸ ನೆನಪಿಸುವ ಕಾರ್ಯದಲ್ಲಿ ಪುಸ್ತಕ ಮಹತ್ವ ಪಡೆದಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶುಕ್ರವಾರ ಸಂಜೆ ಇಲ್ಲಿಯ ಕೋ ಓಪರೇಟಿವ್ ಟೌನ್ ಬ್ಯಾಂಕ್‍ಸಭಾಂಗಣದಲ್ಲಿದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರು ಜ್ಞಾನಗಂಗಾ ಪುಸ್ತಕ ಮಳಿಗೆ ಸಹಕಾರದಲ್ಲಿ ನಡೆದ ಪುಸ್ತಕ ಹಬ್ಬ-ಪುಸ್ತಕ ದಾನಿಗಳ ಮೇಳ ಹಾಗೂ ಸಾಹಿತ್ಯ ವೈಭವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಯುವ ಪೀಳಿಗೆಗೆ ಸಾಹಿತ್ಯದ ಅಭಿರುಚಿ ಜತೆಗೆ ಪುಸ್ತಕ ಓದುವ ಹವ್ಯಾಸವನ್ನು ಪುಸ್ತಕ ಹಬ್ಬದ ಮೂಲಕ ನಡೆಯುತ್ತಿದೆ ಎಂದ ಅವರು, ಭಾಷೆ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆ ಜನಸಾಮಾನ್ಯರ ಭಾಷೆಯಾಗಿ ಪರಿವರ್ತನೆ ಆಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಭವನಕ್ಕೆ ಸರಕಾರದಿಂದ ಜಾಗ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಕನ್ನಡ ಪೇಟ ತೊಡಿಸಿ, ಕನ್ನಡ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಕೆಳೆದ ಕೆಲವು ತಿಂಗಳುಗಳಿಂದ ಹಳ್ಳಿ ಹಳ್ಳಿಗೆ ಗ್ರಾಮ ಸಾಹಿತ್ಯದ ಮೂಲಕ ಜನರನ್ನು ಸಾಹಿತ್ಯದತ್ತ ಮುಖಮಾಡುವಂತೆ ಮಾಡಲಾಗುತ್ತದೆ. ಅಲ್ಲದೆ ದಾನಿಗಳಿಂದ ಪುಸ್ತಕವನ್ನು ಪಡೆದು ಶಾಲಾ-ಕಾಲೇಜುಗಳಿಗೆ ಒದಗಿಸಲಾಗುತ್ತದೆ. ಅಲ್ಲದೆ ಬಸ್ ನಿಲ್ದಾಣಗಳಲ್ಲಿ ಪುಸ್ತಕಗಳನ್ನು ಜೋಡಣೆ ಮಾಡಿ ಜನತೆ ಪುಸ್ತಕದತ್ತ ಆಕರ್ಷಿಸುವಂತೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೇರಳ ನಿವಾಸಿ ಪುತ್ತೂರಿನ ಯೂನಿಯನ್ ಬ್ಯಾಂಕ್ ಉದ್ಯೋಗಿ ಎಲ್.ಬಿ.ಜಾನ್ ಅವರಿಗೆ ಕನ್ನಡ ಪುಸ್ತಕ ನೀಡಿ ಕನ್ನಡ ಕಲಿಸಲಾಗುವುದು ಎಂದು ತಿಳಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ವಹಿಸಿದ್ದರು. ಪುಸ್ತಕ ಮೇಳವನ್ನು ಉದ್ಯಮಿ ಗೋಪಾಲಕೃಷ್ಣ ಭಟ್ ಉದ್ಘಾಟಿಸಿದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ಹಿರಿಯ ಸಾಹಿತ್ಯ ಪ್ರೊ.ವಿ.ಬಿ.ಅರ್ತಿಕಜೆ, ಕೋಶಾಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು, ಡಾ.ಸುಧಾ ಎಸ್.ರಾವ್, ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡೆಂಕಿರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೃತಿಕಾರರಾದ ಸಂಧ್ಯಾ ದತ್ತಾತ್ರೇಯ ರಾವ್ ಅವರ ಮಕ್ಕಳ ಕವನ ಸಂಕಲನ ಸಕ್ಕರೆ ಗೊಂಬೆ ಹಾಗೂ ಕವನ ಸಂಕಲನ ಭಾವ ದ್ಯುತಿ ಯನ್ನು ವಿವೇಕಾನಂದ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಎಚ್.ಜಿ.ಶ್ರೀಧರ್ ಅನಾವರಣ ಮಾಡಿದರು.
ಕಸಾಪ ಗೌರವ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಬಾಬು ಎಂ. ಕಾರ್ಯಕ್ರಮ ನಿರೂಪಿಸಿದರು.