ಪುತ್ತೂರು: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಇಷ್ಟು ಪ್ರಮಾಣದ ಯೋಜನೆಯ ದೇಶದಲ್ಲಿ ಯಾರೂ ನೀಡಿಲ್ಲ. ಪ್ರತಿಯೊಂದು ಮನೆಗೆ, ಜನರಿಗೆ ಪ್ರಯೋಜನವಾಗುವ ಯೋಜನೆಯನ್ನು ಜಾರಿಗೆ ತರುವ ಮೂಲಕ ಜನರಿಗೆ ಶಕ್ತಿ ನೀಡುವ ಕೆಲಸ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಶುಕ್ರವಾರ ನಗರದ ಪುರಭವನದಲ್ಲಿ ರಾಜ್ಯ ಸರಕಾರದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಯೋಜನೆಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಆದ್ದರಿಂದ ಜನರು ಇದರ ಫಲಾನುಭವಿಗಳಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ ಬಾಕಿ ಇರುವ ಶೇ. 21ನ್ನು ಅತೀ ಶೀಘ್ರದಲ್ಲಿ ತಲುಪುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ದಿವಾಳಿ ಆಗುತ್ತದೆ ಎಂದು ಟೀಕೆ ಮಾಡಲು ಶುರು ಮಾಡಿದರು. ಇಂದು ಎಲ್ಲಾ ಟೀಕೆಗಳಿಗೆ ನಾವು ಕೆಲಸದಿಂದ ಉತ್ತರ ನೀಡಿದ್ದೇವೆ. ಪ್ರಧಾನಿಯೂ ಟೀಕೆ ಮಾಡಿದರು. ಅದೇನಿದ್ದರೂ ಕಾಂಗ್ರೆಸ್ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ 12 ಲಕ್ಷ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ನಮ್ಮನ್ನು ಟೀಕೆ ಮಾಡುವ ಬಿಜೆಪಿ ಸರಕಾರ ಕೇವಲ 3-4 ಲಕ್ಷ ಮನೆಗಳನ್ನಷ್ಟೇ ನಿರ್ಮಿಸಿದೆ. ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ಎನ್ನುವುದು ಇದರಿಂದ ಸಾಬಿತಾಗಿದೆ ಎಂದರು.
ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎಂ.ಆರ್.ಐ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಾಕಿಯಾಗಿರುವ ಅರ್ಜಿಗಳನ್ನು ಶೀಘ್ರ ವಿಲೇ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಇಲ್ಲದೇ ಹೋದರೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ. ಮದ್ಯವರ್ತಿಗಳ ಪ್ರವೇಶಕ್ಕೆ ಅವಕಾಶ ನೀಡಬಾರದು. ಒಟ್ಟಿನಲ್ಲಿ ಜನರಿಗೆ ಕಿರುಕುಳ, ತೊಂದರೆ ಆಗಬಾರದು. ಅಂತಹ ಉತ್ತಮ ಆಡಳಿತವನ್ನು ಜಿಲ್ಲಾಧಿಕಾರಿ, ಜಿ.ಪಂ. ಸಿಇಓ ನೀಡಬೇಕು. ಆಡಳಿತದಲ್ಲಿ ಶಿಸ್ತುಬದ್ಧವಾಗಿರಬೇಕು. ಆಗ ಜನರಿಗೆ ಪ್ರಯೋಜನ ಆಗುತ್ತದೆ. ಆಡಳಿತದಲ್ಲಿ ದ.ಕ. ನಂಬರ್ ವನ್ ಆಗಬೇಕು ಎಂದು ಸೂಚನೆ ನೀಡಿದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಅಧಿಕಾರಕ್ಕೆ ಬಂದ ಕೆಲವೆ ದಿನದಲ್ಲಿ ಕಾಂಗ್ರೆಸ್ ಸರಕಾರ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಇದನ್ನು ಟೀಕೆ ಮಾಡಿದವರು ರಾಜ್ಯ ದಿವಾಳಿ ಆಗುತ್ತದೆ ಎಂದರು. ಆದರೆ ಅವರಿಗೆ ಮನಿ ಮ್ಯಾನೇಜ್ಮೆಂಟ್ ತಿಳಿದಿಲ್ಲ. ಇಷ್ಟೆಲ್ಲಾ ಯೋಜನೆಗಳನ್ನು ಜಾರಿಗೆ ತರುವುದಲ್ಲದೇ, ಉಳಿದ ಕಾರ್ಯಗಳಿಗೆ ತೊಂದರೆ ಆಗದಂತೆ ನಡೆಯುತ್ತಿದೆ ಎಂದರು.
ಮಂ.ವಿ.ಸ.ಕಂ. ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ಮಾತನಾಡಿ, ರಾಜ್ಯದಲ್ಲಿ ಶೇ. 93 ನೋಂದಾವಣೆ ಆಗಿದ್ದು, ದ.ಕ.ದಲ್ಲಿ ಶೇ. 79 ನೋಂದಾವಣೆ ಆಗಿದೆ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಪಂ ಸಿಇಓ ಡಾ. ಆನಂದ ಕೆ., ಎಎಸ್ಪಿ ಧರ್ಮೆಂದ್ರ, ಸಹಾಯಕ ಆಯುಕ್ತ ಗಿರೀಶ್ ನಂದನ್, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಕೆ. ಉಪಸ್ಥಿತರಿದ್ದರು. ಮಂ.ವಿ.ಸ.ಕಂ. ತಾಂತ್ರಿಕ ನಿರ್ದೇಶಕ ಹೆಚ್.ಜಿ. ರಮೇಶ್ ಸ್ವಾಗತಿಸಿ, ಮೆಸ್ಕಾಂ ಮುಖ್ಯ ಇಂಜಿನಿಯರ್ ಪುಷ್ಪ ಎಸ್.ಎ. ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.