ಕಾರ್ಕಳ: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೂರು ದಿನ ತುಂಬುವಷ್ಟರಲ್ಲಿ ನೂರು ಶೇ. ಭ್ರಷ್ಟ ಸರಕಾರವಾಗಲಿದೆ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಲೇವಡಿ ಮಾಡಿದ್ದಾರೆ.
ಗುತ್ತಿಗೆದಾರ ಗೌತಮ್ ಆತ್ಮಹತ್ಯೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರಕ್ಕೆ ಬಂದ ಮರು ದಿನದಿಂದಲೇ ಅಧಿಕೃತವಾಗಿ ಭ್ರಷ್ಟಾಚಾರದ ಅಂಗಡಿ ಬಾಗಿಲು ತೆರೆದ ಕಾಂಗ್ರೆಸ್ಸಿಗರು ಆರೋಪಗಳನ್ನೆಲ್ಲಾ ನಕಲಿ ಎಂದು ಜಾರಿಕೊಳ್ಳುತ್ತಿದ್ದರು. ಇದೀಗ ಸರಕಾರದ ಧನದಾಹಕ್ಕೆ ಗುತ್ತಿಗೆದಾರ ಗೌತಮ್ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದರು.
ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸರಕಾರದ ವಿರುದ್ಧ ಬಿಡುಗಡೆಯಾದ ಪ್ರತಿ ದಾಖಲೆಯನ್ನೂ ನಕಲಿ ಎಂದು ನುಣುಚಿಕೊಂಡಿದ್ದರು. ಈ ಆತ್ಮಹತ್ಯೆಯನ್ನೂ ನಕಲಿ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದ ಅವರು, ಗುತ್ತಿಗೆದಾರರು ನಿಮ್ಮ ಸರಕಾರದ ವಿರುದ್ಧ ಹದಿನೈದು ಪರ್ಸೆಂಟ್ ಆರೋಪ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ನೂರು ದಿನ ಪೂರೈಸುವುದರೊಳಗೆ ಇಷ್ಟೊಂದು ಆರೋಪ. ಇನ್ನೆಷ್ಟು ಗುತ್ತಿಗೆದಾರರನ್ನು ಸಾವಿನ ದವಡೆಗೆ ನೂಕಲು ನೀವು ಯೋಜಿಸಿದ್ದೀರಿ. ಸರಕಾರ ನೂರು ದಿನ ಪೂರೈಸುವ ಹೊತ್ತಿಗೆ ನಿಮ್ಮದು 100 ಶೇ. ಭ್ರಷ್ಷ ಸರಕಾರವಾಗುವುದರಲ್ಲಿ ಅನುಮಾನವಿಲ್ಲ ಎಂದು ಟೀಕಿಸಿದ್ದಾರೆ.