ಒಂದನೇ ತರಗತಿ ಸೇರಲು 6 ವರ್ಷ : ಸರಕಾರದ ನಿರ್ಧಾರ ಎತ್ತಿಹಿಡಿದ ಹೈಕೋರ್ಟ್‌

2025-26ನೇ ಶೈಕ್ಷಣಿಕ ವರ್ಷದಿಂದ ಜಾರಿ

ಬೆಂಗಳೂರು : ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2025-26ನೇ ಸಾಲಿನಿಂದ ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ 5 ವರ್ಷ 5 ತಿಂಗಳು ಬದಲು 6 ವರ್ಷ ತುಂಬಿರಬೇಕು ಎಂದು ರಾಜ್ಯ ಸರ್ಕಾರ 2022ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಈ ಕುರಿಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು 2022ರ ಜು.26ರಂದು ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ಬೆಂಗಳೂರಿನ ಅನಿಕೇತ್ ಎಂಬವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್‌ ಮಗದುಂ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟೋತ್ಥಾನ ವಿದ್ಯಾಕೇಂದ್ರದಲ್ಲಿ ತಮ್ಮ ಪುತ್ರಿ ತಿಷಿಕಾಳನ್ನು ಪ್ರಸಕ್ತ ವರ್ಷ ಎಲ್‌ಕೆಜಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಅರ್ಜಿದಾರರು ಕೋರಿದ್ದರು. ಇದಕ್ಕೆ ಪೂರಕವಾಗಿ ಅರ್ಜಿದಾರರಿಂದ ಶಾಲೆ ನಿಗದಿತ ಶುಲ್ಕ ಸಹ ಪಡೆದಿತ್ತು. ಆದರೆ, 2023ರ ಜೂ.1ಕ್ಕೆ ತಿಷಿಕಾಗೆ ನಾಲ್ಕು ವರ್ಷ ಪೂರ್ಣಗೊಂಡಿರಲಿಲ್ಲ. ಇದರಿಂದ ಆಕೆ ಎಲ್‌ಕೆಜಿಗೆ ಪ್ರವೇಶ ಪಡೆಯಲು ಅನರ್ಹಳಾಗಿದ್ದಾಳೆ ಎಂದು ತಿಳಿಸಿ ಶಾಲೆಯು ಅರ್ಜಿದಾರರಿಗೆ ಇ-ಮೈಲ್ ಮಾಡಿತ್ತು. ಒಂದನೇ ತರಗತಿ ಪ್ರವೇಶಕ್ಕೆ 2025-26ನೇ ಸಾಲಿನಲ್ಲಿ ಆರು ವರ್ಷ ತುಂಬಿರಬೇಕು ಎಂಬುದಾಗಿ ತಿಳಿಸಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು 2018ರ ಮೇ 23ರಂದು ಹೊರಡಿಸಿದ ಅಧಿಸೂಚನೆಯನ್ನೂ ಇ-ಮೇಲ್‌ನಲ್ಲಿ ಲಗತ್ತಿಸಿದ್ದ ಶಾಲೆ, ಸರ್ಕಾರದ ಅಧಿಸೂಚನೆ ಪ್ರಕಾರ ತಿಷಿಕಾಳನ್ನು ನರ್ಸರಿಯಲ್ಲೇ ಉಳಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿತ್ತು.

ಸರ್ಕಾರದ ಈ ಅಧಿಸೂಚನೆ ರದ್ದು ಕೋರಿ ಹೈಕೋರ್ಚ್ ಮೆಟ್ಟಿಲೇರಿದ್ದ ಅರ್ಜಿದಾರರು, 2020ರ ಮೇ 11ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 5.5 ವರ್ಷ ಆಗಿರಬೇಕು. ಎಲ್‌ಕೆಜಿಗೆ ಮಗು ಸೇರಿಸಲು 3.5 ವರ್ಷ ಆಗಿರಬೇಕು. ಈ ಅಧಿಸೂಚನೆಯು ತಮಗೆ ಅನ್ವಯವಾಗುತ್ತದೆ ಹೊರತು 2018ರ ಮೇ 23ರ ಅಧಿಸೂಚನೆಯಲ್ಲ ಎಂದು ತಿಳಿಸಿದ್ದರು. ಅರ್ಜಿದಾರರ ಈ ವಾದ ಒಪ್ಪದ ಹೈಕೋರ್ಟ್‌, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಕೇಂದ್ರಿತವಾಗಿ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020ರಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ಮತ್ತು ಗರಿಷ್ಠ ಅರ್ಹತಾ ಮಾನದಂಡ ಸರಿಯಾಗಿ ಮಾರ್ಪಾಡು ಮಾಡಲಾಗಿದೆ. ಜಾಗತಿಕ ಶೈಕ್ಷಣಿಕ ಮಾರ್ಗಸೂಚಿ ಆಧರಿಸಿ ಶಾಲಾ ಪ್ರವೇಶಾತಿ ವಯಸ್ಸನ್ನು ಎನ್‌ಇಪಿ ಮಾನದಂಡಗಳಲ್ಲಿ ಸೇರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top