ಪುತ್ತೂರು: ಶಾಂತಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.9 ಬುಧವಾರ ಶಾಂತಿಗೋಡು ಸಂಘದ ವಠಾರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಸಹಕಾರವು ಹೀಗೆ ಮುಂದುವರೆಯಲಿ. ಸಂಘವು ಉನ್ನತ ಶ್ರೇಣಿಯ ಕೊಂಡೊಯ್ಯಲು ತಮ್ಮ ಸಹಕಾರವು ಅತ್ಯಮೂಲ್ಯ ಎಂದು ಹೇಳಿದ ಅವರು, ದನಗಳಿಗೆ ವಿಮೆ ಮಾಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಹಾಲು ಒಕ್ಕೂಟದ ವೈದ್ಯಾಧಿಕಾರಿ ಡಾಕ್ಟರ್ ಅನುದೀಪ್ ಸಾಕಾಣಿಕೆಯ ಬಗ್ಗೆ ಮತ್ತು ದನಗಳಿಗೆ ನೀಡುವಂತಹ ಪಶು ಆಹಾರ, ಲವಣ ಮಿಶ್ರಣದ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.
ವಿಸ್ತರಣಾಧಿಕಾರಿ ನಾಗೇಶ್ ಆಡಿಟ್ ವರದಿ ಓದಿದರು. ಸಂಘದ ಕಾರ್ಯದರ್ಶಿ ಯಶೋಧ ವರದಿ ವಾಚಿಸಿದರು. ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಟ್ , ಲೀಟರ್ ಗೆ 63 ಪೈಸೆ ಬೋನಸ್ ಘೋಷಿಸಲಾಯಿತು. 2022-23ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ದಿವ್ಯ ಪ್ರಸಾದ್ ಕಕ್ವೆ ಪ್ರಥಮ ಹಾಗೂ ನಾಗಮ್ಮ ಬಾಲಕೃಷ್ಣ ತೋಟ ಅವರಿಗೆ ದ್ವಿತೀಯ ಬಹುಮಾನ ನೀಡಲಾಯಿತು. ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಅಕ್ಷಿತಾ ಮತ್ತು ಜಯಂತಿ ಪ್ರಾರ್ಥನೆ ಹಾಡಿದರು. ಶಾಂತಿಗೋಡು ಹಾಲು ಉತ್ಪಾದಕ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷೆ ಚಂಪಾವತಿ ಸ್ವಾಗತಿಸಿದರು. ನಿರ್ದೇಶಕಿ ಭಾರತಿ ವಂದಿಸಿದರು. ಈ ಸಂದರ್ಭದಲ್ಲಿ ಕರು ಸಾಕಾಣಿಕೆ ಕುರಿತ ಮಾಹಿತಿ ಪತ್ರ ವಿತರಿಸಲಾಯಿತು.