ಪುತ್ತೂರು: ಸವಣೂರು ಯುವ ಮಂಡಲ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಸೌಜನ್ಯ ಕೊಲೆಯ ನೈಜ ಆರೋಪಿಗಳ ಪತ್ತೆಗೆ ಹಕ್ಕೊತ್ತಾಯದ ಕುರಿತು ಸಾರ್ವಜನಿಕ ಮೌನ ಪ್ರತಿಭಟನೆ ಸವಣೂರಿನಲ್ಲಿ ಸೋಮವಾರ ನಡೆಯಿತು.

ಸವಣೂರು ಪದ್ಮಾವತಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗಿರಿಶಂಕರ ಸುಲಾಯ ಮೌನ ಮೆರವಣಿಗೆಗೆ ಚಾಲನೆ ನೀಡಿದರು. ರಾಕೇಶ್ ರೈ ಕೆಡೆಂಜಿ ಸಂದರ್ಭೋಚಿತವಾಗಿ ಮಾತನಾಡಿದರು. ಬಳಿಕ ಮೌನ ಮೆರವಣಿಗೆ ಸಾಗಿ ಸವಣೂರು ವೃತ್ತದಲ್ಲಿ ಸಮಾಪನಗೊಂಡು ಬಳಿಕ ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೋಡಿಂಬೈಲು ಅವರು ಸವಣೂರು ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಮನ್ಮಥ ಅವರ ಮೂಲಕ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೆಳಂದೂರು ಗ್ರಾಪಂ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಉಪಾಧ್ಯಕ್ಷ ಗಣೇಶ್ ಉದನಡ್ಕ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಹಿಂಜಾವೇ ಅಧ್ಯಕ್ಷ ವಾಸುದೇವ ಇಡ್ಯಾಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಪ್ರಕಾಶ್ಚಂದ್ರ ರೈ ಮುಗೇರು, ನಿವೃತ್ತ ಶಿಕ್ಷಕಿ ರೇವತಿ ಬರೆಪ್ಪಾಡಿ, ತಾರನಾಥ ಕಾಯರ್ಗ, ಸುಪ್ರಿತ್ ರೈ ಖಂಡಿಗ, ಸುರೇಶ್ ರೈ ಸೂಡಿಮುಳ್ಳು ಸವಣೂರು ಗ್ರಾಪಂ ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ. ಪಂಚಾಯತ್ ಸದಸ್ಯರುಗಳು ಆಟೋ ಚಾಲಕರು, ಹಿಂಜಾವೇ ಪದಾಧಿಖಕಾರಿಗಳು, ಸದಸ್ಯರು, ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ನಾಳೆ (ಆ.8) ನಿಂತಿಕಲ್ಲಿನಿಂದ ಸುಳ್ಯ ತನಕ ನಡೆಯುವ ಮೌನ ಜಾಥಾದಲ್ಲಿ ಪಾಲ್ಗೊಳ್ಳುವಂತೆ ಈ ಸಂದರ್ಭದಲ್ಲಿ ವಿನಂತಿಸಲಾಯಿತು.