ಮಂಡ್ಯ: ರಾಜ್ಯ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಕೃಷಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ತಲಾ 6 ರಿಂದ 8 ಲಕ್ಷ ರೂ. ನೀಡುವಂತೆ ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ 7 ಮಂದಿ ಸಹಾಯಕ ಕೃಷಿ ನಿರ್ದೇಶಕರು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಮೂಲಕ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಈ ಕುರಿತು ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಹಾಗೂ ಮದ್ದೂರು ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ದೂರು ಅರ್ಜಿ ಸಲ್ಲಿಸಿದ್ದಾರೆ.
ಲಂಚ ಕೇಳುವ ಇಂತಹಾ ಅನಿಷ್ಠ ಪದ್ಧತಿಗೆ ಕಡಿವಾಣ ಹಾಕುವಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಅಧಿಕಾರಿಗಳು ಕುಟುಂಬ ಸದಸ್ಯರ ಜತೆ ವಿಷ ಕುಡಿಯುವುದಾಗಿ ತಿಳಿಸಿದ್ದರಿಂದ ದೂರು ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರ ಆಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.