ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಜ್ಞಾನಗಂಗಾ ಪುಸ್ತಕ ಮಳಿಗೆ ವತಿಯಿಂದ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ ಹಾಗೂ ಸಾಹಿತ್ಯ ವೈಭವ ಕಾರ್ಯಕ್ರಮ ಆ.11, 12 ಹಾಗೂ 13 ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯುವ ಜನತೆಯಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಹಾಗೂ ಸಾಹಿತ್ಯ ಕ್ಷೇತ್ರದತ್ತ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಒಂದು ಪುಸ್ತಕ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಆ.11 ಶುಕ್ರವಾರ ಸಂಜೆ 4 ಗಂಟೆಗೆ ಮಾಜಿ ಶಾಸಕ ಸಂಜೀವ ಮಠಂದೂರು ದೀಪ ಪ್ರಜ್ವಲನೆ ಮಾಡಲಿದ್ದು, ಕಸಾಪ ದ.ಕ.ಜಿಲ್ಲಾ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸುವರು. ಪುತ್ತೂರು ದ್ವಾರಕಾ ಕನ್ ಸ್ಟ್ರಕ್ಷನ್ ನ ಗೋಪಾಲಕೃಷ್ಣ ಭಟ್ ಪುಸ್ತಕ ಮೇಳ ಉದ್ಘಾಟಿಸುವರು. ಹಿರಿಯ ಸಾಹಿತಿ, ಪತ್ರಕರ್ತ ವಿ.ಬಿ.ಅರ್ತಿಕಜೆ ಪ್ರಥಮ ಪುಸ್ತಕ ದಾನಿಗಳಾಗಿದ್ದು, ಕಸಾಪ ದ.ಕ.ಜಿಲ್ಲಾ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಉಪಸ್ಥಿತರಿರುವರು. ಮುಖ್ಯ ಅತಿಥಿಯಾಗಿ ಡಾ.ಸುಧಾ ರಾವ್ ಪಾಲ್ಗೊಳ್ಳುವರು. ಬಳಿಕ ಕೃತಿ ಬಿಡುಗಡೆಯಲ್ಲಿ ಸಂಧ್ಯಾ ದತ್ತಾತ್ರೇಯ ರಾವ್ ಅವರ ಮಕ್ಕಳ ಕವನ ಸಂಕಲನ ಸಕ್ಕರೆ ಗೊಂಬೆ, ಕವನ ಸಂಕಲನ ಭಾವ ದ್ಯುತಿಯನ್ನು ಹಿರಿಯ ಸಾಹಿತಿ, ವಿವೇಕಾನಂದ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ.ಎಚ್.ಜಿ.ಶ್ರೀಧರ್ ಬಿಡುಗಡೆ ಮಾಡುವರು. ಬಳಿಕ ಕವನ ಸಂಕಲನದ ಆಯ್ದ ಗೀತೆಗಳ ಗಾಯನ ನಡೆಯಲಿದೆ.
ಸಂಜೆ 5.30 ಕ್ಕೆ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಸಂಘದಿಂದ “ಮಾಗಧ ವಧೆ” ತಾಳಮದ್ದಳೆ ನಡೆಯಲಿದೆ ಎಂದು ತಿಳಿಸಿದರು.
ಆ.12 ಶನಿವಾರ ಬೆಳಿಗ್ಗೆ 10 ರಿಂದ ಆಸಕ್ತ ವಿದ್ಯಾರ್ಥಿಗಳಿಗೆ ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರ-ಯಶಸ್ ಸಹಯೋಗದೊಂದಿಗೆ ಐಎಎಸ್, ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ನಡೆಯಲಿದೆ. ಬಳಿಕ ಐಎಎಸ್ ದರ್ಶನ ಯೂಟ್ಯೂಬ್ ಚಾನೆಲನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಲೋಕಾರ್ಪಣೆ ಮಾಡುವರು. ಮಧ್ಯಾಹ್ನ 2 ರಿಂದ ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‍ಮೆಂಟ್ ಸ್ಟಡೀಸ್ ಸಹಯೋಗದಲ್ಲಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರ ಆತ್ಮಕಥನ “ದೀವಿಗೆ” ಕೃತಿ ಲೋಕಾರ್ಪಣೆಯನ್ನು ಹಿರಿಯ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ವಿ.ಬಿ.ಅರ್ತಿಕಜೆ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡಿನ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ನಡೆಸುವರು. ಸಂಜೆ 4.30 ಕ್ಕೆ ಉಪನ್ಯಾಸ ಹಾಗೂ ಸಂವಾದ ಕಾಯಕ್ರಮ ನಡೆಯಲಿದೆ. ಸಂಜೆ 5.30 ಕ್ಕೆ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಆ.13 ಭಾನುವಾರ ಬೆಳಿಗ್ಗೆ 10 ಕ್ಕೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕವಿಗೋಷ್ಠಿ ಹಿರಿಯ ಸಾಹಿತಿ ಗಣೇಶ್ ಪ್ರಸಾದ್ ಪಾಂಡೇಲು ಅವರ ನೇತೃತ್ವದಲ್ಲಿ ನಡೆಯಲಿದೆ. ಬಳಿಕ ಸುನಾದ ಸಂಗೀತ ಶಾಲೆಯ ಕಾಂಚನ ಈಶ್ವರ ಭಟ್ ಶಿಷ್ಯ ವೃಂದದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದು, ಬಜತ್ತೂರು ವಳಾಲು ಸರಕಾರಿ ಪ್ರೌಢಶಾಲಾ ಸಹಶಿಕ್ಷಕಿ ಪುಷ್ಪಲತಾ ಎಂ. ಸಮಾರೋಪ ಭಾಷಣ ಮಾಡುವರು. ಬಳಿಕ ಅಡೂರು ಸೂರ್ಯನಾರಾಯಣ ಕಲ್ಲೂರಾಯ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸಮಾಜ ಸೇವಕ, ಯಕ್ಷಗಾನ ಅರ್ಥಧಾರಿ ಸೀತಾರಾಮ ಕುಂಜತ್ತಾಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಲ್ಲಾ ಕಸಾಪ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿನಂದಿಸಲಿದ್ದು, ಮುಖ್ಯ ಅತಿಥಿಗಳಾಗಿ ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಅನಿವಾಶ್ ಕೊಡಂಕಿರಿ, ಹಿರಿಯ ಸಾಹಿತಿ ನಾ.ಕಾರಂತ ಪೆರಾಜೆ ಪಾಲ್ಗೊಳ್ಳಲಿದ್ದಾರೆ. ದ.ಕ.ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸುಂದರ ನಾಯ್ಕ್ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ, ಕಸಾಪ ಪುತ್ತೂರು ಗೌರವ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಗೌರವ ಕೋಶಾಧ್ಯಕ್ಷ ಡಾ.ಹರ್ಷ ಕುಮಾರ್ ರೈ, ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡಿಂಕಿರಿ ಉಪಸ್ಥಿತರಿದ್ದರು.