ಮಂಗಳೂರು : ಉಜಿರೆಯಲ್ಲಿ 2011ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಎಚ್ಚರಿಸಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ. ಮಾತನಾಡಿ, ಸೌಜನ್ಯ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ನಿರಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಪ್ರಕರಣದ ನೈಜ ಆರೋಪಿಗಳು ಯಾರು ಎಂಬುದು ಇದುವರೆಗೆ ಪತ್ತೆಯಾಗಿಲ್ಲ. ರಾಜ್ಯ ಸರಕಾರ ಪ್ರಕರಣದ ಮರುತನಿಖೆ ನಡೆಸಿ ನೈಜ ಅಪರಾಧಿಯನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಪ್ರಕರಣದ ಬಗ್ಗೆ ಈಗಾಗಲೇ ಮೈಸೂರು, ಮಂಡ್ಯ, ಹಾಸನ, ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹೋರಾಟದ ಬಗ್ಗೆ ನಿರ್ಧರಿಸಲು ಆ. 6 ರಂದು ಪುತ್ತೂರಿನ ಒಕ್ಕಲಿಗರ ಭವನದಲ್ಲಿ ಸಭೆ ಆಯೋಜಿಸಲಾಗಿದೆ. ನಮ್ಮ ಬೇಡಿಕೆಗೆ ಸರಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಬಿ. ಬಾಲಕೃಷ್ಣ ಮಾತನಾಡಿ, ಪ್ರಕರಣದ ಅಪರಾಧಿಗಳು ಯಾರು, ತನಿಖೆ ಯಾವ ಹಂತದಲ್ಲಿ ಎಡವಿದೆ, ನೈಜಆರೋಪಿಗಳು ತಪ್ಪಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಸೌಜನ್ಯಳ ಆತ್ಮಕ್ಕೆ ಶಾಂತಿ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕಾಗಿದೆ. ಸಂಘದ ಹೋರಾಟವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳ ಜತೆಯೂ ಚರ್ಚೆ ನಡೆಸಿ ಹೋರಾಟವನ್ನು ತೀವ್ರಗೊಳಿಸುವ ಚಿಂತನೆ ಇದೆ ಎಂದು ಅವರು ಹೇಳಿದರು.
ಸಂತೋಷ್ ರಾವ್ ತನಿಖೆ ಅಗತ್ಯವಿಲ್ಲ ಸೌಜನ್ಯ ಪ್ರಕರಣದ ಮರು ತನಿಖೆ ನಡೆಯಬೇಕು. ಆದರೆ ನಿರಪರಾಧಿಯಾಗಿಯೂ ಈಗಾಗಲೇ ಹಲವು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂತೋಷ್ ರಾವ್ ಅವರಿಗೆ ಮತ್ತೆ ತೊಂದರೆ ಆಗದ ರೀತಿಯಲ್ಲಿ ತನಿಖೆ ಆಗಬೇಕು. ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಸಂತೋಷ್ ರಾವ್ ಅವರನ್ನು ಮತ್ತೆ ತನಿಖೆಗೆ ಒಳಪಡಿಸುವ ಅಗತ್ಯವಿಲ್ಲ. ಈ ಪ್ರಕರಣದಲ್ಲಿ ಸಾಕ್ಷ್ಯ ನಾಶ ಆಗಿರುವುದು ಸಾಬೀತಾಗಿದೆ. ಪ್ರಕರಣ ನಡೆದು ಆರಂಭಿಕ 12 ಗಂಟೆಗಳಲ್ಲೇ ಸಾಕ್ಷ್ಯ ನಾಶ ಮಾಡಲಾಗಿದೆ. ಹಾಗಾಗಿ ಅದಕ್ಕೆ ಕಾರಣರಾದ ಪ್ರಕರಣದ ಆರಂಭಿಕ ತನಿಖಾಧಿಕಾರಿಯನ್ನು ವಿಚಾರಗೊಳಪಡಿಸಲು ನ್ಯಾಯಾಧೀಶರ ತಂಡದಿಂದ ಪ್ರಕರಣದ ಮರು ತನಿಖೆಗೆ ಮುಂದಾಗಬೇಕು. ತನಿಖಾಧಿಕಾರಿಯ ಮೇಲೆ ಯಾರು ಪ್ರಭಾವ ಬೀರಿದ್ದಾರೆ ಎಂಬುದೂ ಬಹಿರಂಗಗೊಳ್ಳಬೇಕು ಎಂದು ಸಂಘದ ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಡೆಗುತ್ತು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಒಕ್ಕಲಿಗರ ಸಂಘದ ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಕಾರ್ಯದರ್ಶಿ ಕಿರಣ್ ಹೊಸೊಳಿಕೆ, ಮಹಿಳಾ ಘಟಕ ಅಧ್ಯಕ್ಷೆ ಪೂರ್ಣಿಮಾ ಕೆ.ಎಂ., ಕಾರ್ಯದರ್ಶಿ ಸಾರಿಕಾ ಸುರೇಶ್, ಸಂಘದ ಕೋಶಾಧಿಕಾರಿ ನವೀನ್ ಚಿಲ್ಬಾರ್, ಜತೆ ಕಾರ್ಯದರ್ಶಿ ರಾಮಚಂದ್ರ, ನಿರ್ದೇಶಕರಾದ ಡಿ. ಪದ್ಮನಾಭ, ರಕ್ಷಿತ್ ಪುತ್ತಿಲ, ಸೌಮ್ಯ ಸುಕುಮಾರ್, ಕಲಾವತಿ, ಪ್ರಮುಖರಾದ ಮಹೇಶ್ ಮೋಂಟಡ್ಕ, ಮಹೇಶ್ ನಡುತೋಟ, ಮಾತೃ ಸಂಘ, ಯುವ ಘಟಕ, ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.