ಪುತ್ತೂರು: ರಸ್ತೆ ಸಮಸ್ಯೆಗೆ ಸಂಬಂಧಿಸಿದ ಕ್ರಮ ಕೈಗೊಂಡಿದ್ದರೂ ಈ ಕುರಿತು ಮಾಹಿತಿ ನೀಡದ ಕಂದಾಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸುಲೋಚನಾ ಅವರಿಗೆ ರಾಜ್ಯ ಮಾಹಿತಿ ಆಯೋಗ 15 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ರಸ್ತೆ ಸಮಸ್ಯೆಗೆ ಸಂಬಂಧಿಸಿದ ಸೂಕ್ತ ಕ್ರಮ ವಹಿಸಲು ಆಯೋಗದ ಕಾರ್ಯದರ್ಶಿಗಳಿಗೆ ಸೂಚಿಸಿದೆ. ಅಲ್ಲದೇ, ಮೇಲ್ಮನವಿದಾರರ ಪ್ರಕರಣದ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಂಡು ಇತ್ಯರ್ಥಪಡಿಸಲು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಸೂಚಿಸಿದೆ.
ಕಳೆದ 25 ವರ್ಷಗಳಿಂದ ಬಳಸುತ್ತಿದ್ದ ಸರಕಾರಿ ಜಾಗವನ್ನು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ್ದರು. ಈ ಕುರಿತು ನೆಟ್ಟಣಿಗೆ ಮುಡ್ನೂರು ಗ್ರಾಮದ ಸರೋಳಿಮೂಲೆ ನಿವಾಸಿ ಶ್ರೀಧರ್ ಪೂಜಾರಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೊದಲು ತಹಶೀಲ್ದಾರ್ ಗೆ ದೂರು ನೀಡಿದ್ದರು. ದೂರು ನೀಡಿ ಒಂದೂವರೆ ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿರದ್ದರಿಂದ ಡಾ. ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿಯಾಗಿದ್ದಾಗ ನಡೆಸಿದ ಗ್ರಾಮ ವಾಸ್ತವ್ಯದಲ್ಲೂ ಮನವಿ ನೀಡಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಪುತ್ತೂರು ತಹಸೀಲ್ದಾರ್ ಅವರಿಗೆ ಸೂಚಿಸಿದ್ದರು. ಈ ಬಗ್ಗೆ ಕೈಗೊಂಡ ಕ್ರಮದ ಮಾಹಿತಿಯನ್ನು ನೀಡುವಂತೆ ಶ್ರೀಧರ್ ಪೂಜಾರಿ ಮನವಿ ಮಾಡಿಕೊಂಡಿದ್ದರು. ನೀಡಿದ್ದ ಮನವಿಗೆ ಸ್ಪಂದನೆ ದೊರಕದೇ ಇದ್ದಾಗ ಮೇಲ್ಮನವಿ ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯೋಗ ಇದೀಗ ತೀರ್ಪು ನೀಡಿದೆ. ಆದೇಶದಲ್ಲಿ – ಮೇಲ್ಮನವಿದಾರರಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದೇ ಇರುವುದು, ಮಾತ್ರವಲ್ಲ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ ಬಳಿಕವೂ 2013ರ ಜುಲೈ 24ರ ಮೊದಲು ಅಂದರೆ ಒಂದು ತಿಂಗಳ ಅವಧಿಯಲ್ಲೂ ಮೇಲ್ಮನವಿದಾರರಿಗೆ ಮಾಹಿತಿ ನೀಡಲಾಗಿಲ್ಲ. ಕಡತವು ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ತನಿಖಾ ಹಂತದಲ್ಲಿರುವುದರಿಂದ ವಿಳಂಬ ಎಂದು ತಿಳಿಸಿರುವುದನ್ನು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಮೇಲ್ಮನವಿದಾರರಿಗೆ ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸದೇ ಇರುವುದರಿಂದ 2023ರ ಏಪ್ರಿಲ್ 24 ಮತ್ತು 2023ರ ಮೇ 24ರ ಆದೇಶದಲ್ಲಿ ಕಾಯ್ದೆಯ ಕಲಂ 20(1)ರಡಿಯಲ್ಲಿ ದಂಡ ವಿಧಿಸುವುದಾಗಿ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸಹ ಯಾವುದೇ ಲಿಖಿತ ಸಮಜಾಯಿಷಿಯನ್ನು ಆಯೋಗಕ್ಕೆ ಸಲ್ಲಿಸದೇ ಇರುವುದನ್ನು ಹಾಗೂ ಆಯೋಗದ ವಿಚಾರಣೆಗೆ ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ದಂಡ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.