ಪುತ್ತೂರು: ಕ.ಸಾ. ಪ ಪುತ್ತೂರು ಕಾರ್ಯಕಾರಿ ಸಮಿತಿಯ ಸಮಾಲೋಚನಾ ಸಭೆ ಅಧ್ಯಕ್ಷರ ಕಚೇರಿಯಲ್ಲಿ ನಡೆಯಿತು.
ಕಸಾಪ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯ ಮತ್ತು ಮುಂದೆ ನಡೆಸುವ ಕಾರ್ಯಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಮುಖ್ಯವಾಗಿ ಸಾಹಿತ್ಯ ಪರಿಷತ್ತಿಗೆ ಜಮೀನು ಮಂಜೂರಾಗಲು ಸೂಚನೆ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಸರ್ವ ರೀತಿಯಲ್ಲಿ ಸಹಕಾರ ನೀಡಿದ ಸಹಾಯಕ ಅಯುಕ್ತ ಗಿರೀಶ್ ನಂದನ್ , ನಗರಸಭಾ ಪೌರಾಯುಕ್ತ ಮಧು ಮನೋಹರ್, ಆರ್ ಐ ಮಹೇಶ್, ತಹಸಿಲ್ದಾರ್ ಕಚೇರಿ, ಭೂಮಾಪನ ಇಲಾಖೆ, ಗ್ರಾಮಚಾವಡಿ ಸಹಕರಿಸಿದ ಸರ್ವ ಇಲಾಖೆಯ ಸರ್ವ ಸಿಬ್ಬಂದಿ ವರ್ಗದವರನ್ನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ರಾಜೇಶ್ ಸುವರ್ಣ ಅವರ ಸೇವೆಯನ್ನು ಸ್ಮರಿಸಲಾಯಿತು ಜೊತೆಗೆ ಕನ್ನಡ ಭವನ ನಿರ್ಮಾಣಕ್ಕೆ ಸರ್ವ ರೀತಿಯ ಸಹಕಾರವನ್ನು ಹಾಗೂ ಸಿ.ಎಸ್. ಆರ್ ಫಂಡುಗಳ ಮೂಲಕ ಅನುದಾನವನ್ನು ನೀಡುವ ಭರವಸೆ ನೀಡಿದ ಶಾಸಕ ಅಶೋಕ ರೈ ಅವರ ಕಾರ್ಯವೈಖರಿಯನ್ನು ಹಾಗೂ ಕ್ಷಮತೆಯನ್ನು ಅಭಿನಂದಿಸಲಾಯಿತು. ಕನ್ನಡ ಭವನ ನಿರ್ಮಾಣ ಸಮಿತಿಯನ್ನು ರಚಿಸುವವ ಕುರಿತು ನಿರ್ಣಯಿಸಲಾಯಿತು.
ತಾಲೂಕು ಆಡಳಿತದಿಂದ ನಡೆಸುವ ಹಬ್ಬಗಳ ಆಚರಣಾ ಸಮಿತಿಯಲ್ಲಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ್ ಅವರ ಬಾಲವನದ ಅಭಿವೃದ್ಧಿ ಸಮಿತಿಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತನ್ನು ಸದಸ್ಯರನ್ನಾಗಿ ಸೇರಿಸಬೇಕೆಂದು ಕಸಾಪ ಮಾರ್ಗದರ್ಶಕ ಡಾ.ವಸಂತಕುಮಾರ್ ತಾಳ್ತಜೆ ಯವರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗೆ ಈ ಕುರಿತು ವಿನಂತಿ ಪತ್ರ ನೀಡುವುದಾಗಿ ನಿರ್ಣಯಿಸಲಾಯಿತು.
ಸಭೆಯಲ್ಲಿ -ದ ಕ ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಡಾ ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಕಾರ್ಯದರ್ಶಿ ಹರಿಣಿ ಪುತ್ತೂರಾಯ ವಂದಿಸಿದರು.