ಸೌಜನ್ಯ ಕೊಲೆ ಪ್ರಕರಣ | ದ.ಕ.ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಸಂಘಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಡೆಯ ಕುರಿತು ತೀರ್ಮಾನ | ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆ

ಪುತ್ತೂರು: ಸೌಜನ್ಯ ಕೊಲೆ ಪ್ರಕರಣ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ನಡೆಯುತ್ತಿದೆ. ಒಕ್ಕಲಿಗ ಗೌಡ ಸಂಘವೂ ಮೌನವಹಿಸುವುದಿಲ್ಲ. ದ.ಕ.ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಸಂಘಗಳ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾ ಮಟ್ಟದಲ್ಲಿ ಮುಂದಿನ ನಡೆಯ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯರು ಹೇಳಿದರು.

ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಒಕ್ಕಲಿಗ ಗೌಡ ಸೇವಾ ಸಂಘದ ಮಾತೃ ಸಂಘ, ಯುವ, ಮಹಿಳಾ, ಸ್ವಸಹಾಯ ಸಂಘದ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮುಂದಿಟ್ಟುಕೊಂಡು ಹೋರಾಟಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಸೌಜನ್ಯ ಪ್ರಕರಣದ ಸಂದರ್ಭದಲ್ಲಿ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದ ನಿಯೋಗ ಶ್ರೀಗಳ ಜೊತೆ ಸೌಜನ್ಯ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರವನ್ನು ನೀಡಿವೆ. ಇದೀಗ ಆಕೆಯ ಪ್ರಕರಣಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸಂಘ ದ.ಕ.ಜಿಲ್ಲೆಯಾದ್ಯಂತ ತಾಲೂಕು ಸಂಘಗಳನ್ನು ಸಂಪರ್ಕಿಸಿ ಅವರೆಲ್ಲರ ಅಭಿಪ್ರಾಯದಂತೆ ಮುಂದೆ ಜಿಲ್ಲಾ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.































 
 

ಸಮಾಜ ಬಾಂಧವರ ಸಂಪ್ರದಾಯ ಕುರಿತ ಪುಸ್ತಕ “ಒಕ್ಕೊರಲು“ಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮರು ಮುದ್ರಣಗೊಂಡಿದೆ. ಸಂಘದ ಕಚೇರಿಯಲ್ಲಿ ಸೂಕ್ತ ಬೆಲೆ ನೀಡಿ ಪಡೆಯಬಹುದು ಎಂದೂ ಅಧ್ಯಕ್ಷರು ಹೇಳಿದರು.

ಪುತ್ತೂರು ಭೌಗೋಳಿಕವಾಗಿರುವ ಸಂಘದ ವಲಯಗಳು ಕಡಬ ವ್ಯಾಪ್ತಿಯನ್ನು ಹೊಂದಿತ್ತು. ಕಡಬ ತಾಲೂಕು ಪ್ರತ್ಯೇಕವಾದ ಬಳಿಕ ಭೌಗೋಳಿಕವಾಗಿ ಸಂಘದ ಬೈಲಾದಂತೆ ಪುತ್ತೂರು ತಾಲೂಕು ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ. ಆದರೆ ಉಭಯ ತಾಲೂಕುಗಳಲ್ಲೂ ಸದಸ್ಯರಾದವರಿದ್ದಾರೆ. ಕಾರ್ಯಕಾರಿ ಸಮಿತಿಗೆ ಟೆಕ್ನಿಕಲ್ ಸಮಸ್ಯೆ ಬರುತ್ತದೆ. ಈ ಕುರಿತು ಗೊಂದಲ ಪರಿಹಾರ ಆಗಬೇಕಾಗಿರುವುದರಿಂದ ಸದಸ್ಯರ ಅಭಿಪ್ರಾಯ ತಿಳಿಸುವಂತೆ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ತಿಳಿಸಿದರು. ಪಾಲ್ತಾಡಿ ಗ್ರಾಮದ ಕಡೆಯಿಂದ ಬಂದಿದ್ದ ಹಲವು ಸಲಹೆ ಸೂಚನೆಗಳಿಗೆ ಸಲಹಾ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು ಅವರು ಉತ್ತರವನ್ನು ನೀಡಿದರು.

ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭೌಗೋಳಿಕವಾಗಿ ಪುತ್ತೂರು ತಾಲೂಕು ಸಂಘದ ವ್ಯಾಪ್ತಿಯನ್ನು ಹೊಂದಿಕೊಂಡು ಬೈಲಾ ರಚನೆಯಾಗಿದೆ. ಆದರೆ ಕಡಬ ತಾಲೂಕು ಆದ ಬಳಿಕ ಹಲವು ಗೊಂದಲ ಸದಸ್ಯರಲ್ಲಿ ಮೂಡಿದೆ. ಆರಂಭದಲ್ಲೇ ಸಂಘದ ಬೈಲಾ ತಾಲೂಕು ವ್ಯಾಪ್ತಿಯನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ದ್ವಿ ಸದಸ್ಯತ್ವ ಹೊಂದಿದವರು ಎರಡು ಕಡೆ ಅಧಿಕಾರ ಪಡೆಯಲು ಆಗುವುದಿಲ್ಲ. ಕಾರ್ಯಕಾರಿಣಿ ಸಮಿತಿ ಅಥವಾ ಆಡಳಿತ ಮಂಡಳಿಯಲ್ಲಿ ಇರಲು ಸಾಧ್ಯವಿಲ್ಲ. ಸದಸ್ಯತ್ವ ಪಡೆಯಬಹುದು, ಸಂಘದ ಮಹಾಸಭೆಗೂ ಹಾಜರಾಗಬಹುದು,ಸಂಘದ ಎಲ್ಲಾ ಕಾರ್ಯಕ್ರಮಗಳಿಗೂ ಭಾಗವಹಿಸಬಹುದು. ಕಷ್ಟಕಾಲದಲ್ಲಿ ಯಾರೆಲ್ಲ ಸಹಕಾರ ಮಾಡಿದ್ದಾರೋ ಅವರನ್ನು ಖಂಡಿತಾ ಮರೆಯುವಂತಿಲ್ಲ ಎಂದರಲ್ಲದೆ, ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಭೌಗೋಳಿಕವಾಗಿ ಪುತ್ತೂರು ತಾಲೂಕಿನ ಗ್ರಾಮಗಳಿಗೆ ಸೀಮಿತವಾಗುತ್ತದೆ.ಇಲ್ಲಿ ಗೊಂದಲಕ್ಕೆ ಪರಿಹಾರ ಸಿಗಬೇಕು ಮತ್ತು ಎಲ್ಲರಿಗೂ ನ್ಯಾಯ ಸಿಗಬೇಕೆಂದು ಸಣ್ಣ ತಿದ್ದುಪಡಿ ಅಗತ್ಯ ಎಂದರು.

ಸಭೆಯಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕೂ ಅಧಿಕ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಸಂಘಕ್ಕೆ ಬಂದ ಮನವಿಯ ಮೇರೆಗೆ ಆರ್ಥಿಕ ನೆರವು ನೀಡಲಾಯಿತು.ಶಿವರಾಮ ಮತಾವು ಮತ್ತು ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ವಾರಿಜಾ ಅವರು ವಿದ್ಯಾರ್ಥಿವೇತನ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಗೌಡ ಕಲ್ಲಾರೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ ನಿರ್ವಹಿಸಿದರು.

ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ, ಮಹಿಳಾ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ವಾರಿಜಾ, ಯುವ ಗೌಡ ಸೇವಾ ಸಂಘದಪ್ರಧಾನ ಕಾರ್ಯದರ್ಶಿ ಸುಬ್ರಾಯ ಗೌಡ ಪಾಲ್ತಾಡಿ ವಾರ್ಷಿಕ ವರದಿ ವಾಚಿಸಿದರು. ಒಕ್ಕಲಿಗ ಸ್ವ ಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ.ಅವರು ಸಂಘದ ಕಾರ್ಯಕ್ರಮದ ಪ್ರಯೋಜನದ ಕುರಿತು ಮಾಹಿತಿ ನೀಡಿದರು. ಸಂಘದ ಖಜಾಂಚಿ ಲಿಂಗಪ್ಪ ಗೌಡ ಲೆಕ್ಕಪತ್ರ ಮಂಡಿಸಿದರು.ಸಮುದಾಯ ಭವನದ ಉಸ್ತುವಾರಿ ದಯಾನಂದ ಕೆ.ಎಸ್.ಅವರು ಸಮುದಾಯ ಭವನದ ಲೆಕ್ಕಪತ್ರ ಮಂಡಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಸಂಘದ ನಿಕಟಪೂರ್ವ ಅಧ್ಯಕ್ಷ ಶಿವರಾಮ ಹೆಚ್.ಡಿ., ಯುವ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಒಕ್ಕಲಿಗ ಸ್ವಸಹಾಯ ಸಂಘದ ಕಾರ್ಯದರ್ಶಿ ದಿವ್ಯಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಸ್ವಾಗತಿಸಿ, ರವಿ ಮುಂಗ್ಲಿಮನೆ ವಂದಿಸಿದರು. ಆ.6ರಂದು ಒಕ್ಕಲಿಗ ಮಹಿಳಾ ಸಂಘದ ಆಶ್ರಯದಲ್ಲಿ ನಡೆಯುವ ಆಟಿ ಹಬ್ಬ ಕಾರ್ಯಕ್ರಮದ ಆಮಂತ್ರಣವು ಮಾಜಿ ಶಾಸಕ ಸಂಜೀವ ಮಠಂದೂರು ಸಭೆಯ ಕೊನೆಯಲ್ಲಿ ಬಿಡುಗಡೆಗೊಳಿಸಿದರು. ಇತ್ತೀಚೆಗೆ ನಿಧನರಾದ ಸಂಘದ ಪೂರ್ವಾಧ್ಯಕ್ಷ ಚಂದ್ರಶೇಖರ್ ಮುಂಗ್ಲಿಮನೆ ಅವರಿಗೆ ಸಭೆಯ ಆರಂಭದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಬಳಿಕ ಮಹಾಸಭೆಯನ್ನು ಆರಂಭಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top