ಬೆಂಗಳೂರು : ಅನುದಾನ ಬಿಡುಗಡೆ ಮಾಡಲು ಕೂಡ ಸಚಿವರು ಕಮಿಷನ್ ಕೇಳುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿ ಶಾಸಕರು ಬರೆದಿರುವ ಪತ್ರದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್‌ನ ಶಾಸಕಾಂಗ ಸಭೆ ನಡೆಯಲಿದೆ.
ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಈ ಶಾಸಕಾಂಗ ಸಭೆ ಬಹಳ ಕುತೂಹಲ ಮೂಡಿಸಿದೆ.
ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ, ಎಂ.ಕೃಷ್ಣಪ್ಪ ಸೇರಿದಂತೆ ಹಲವು ಹಿರಿಯ ಶಾಸಕರೇ ಶಾಸಕಾಂಗ ಸಭೆ ಕರೆಯುವಂತೆ ಒತ್ತಡ ಹಾಕಿದ್ದಾರೆ. ಅಲ್ಲದೆ ಸಚಿವರ ವಿರುದ್ಧ ಶಾಸಕರ ಪತ್ರ ಸಮರ ಮತ್ತು ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿರುವ ಹೊತ್ತಲ್ಲಿ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.
ಸಚಿವರು ಶಾಸಕರಿಗೆ ಸಹಕಾರ ನೀಡುತ್ತಿಲ್ಲ ಎನ್ನುವ ಆರೋಪವಿದ್ದು, ಸಚಿವರ ಕಾರ್ಯವೈಖರಿ ಬಗ್ಗೆ ಹಲವು ಶಾಸಕರಲ್ಲಿ ಅಸಮಾಧಾನಗೊಂಡಿದ್ದಾರೆ. ಯಾವ ಸಚಿವರಿಂದ ಕಿರಿಕಿರಿ ಆಗುತ್ತಿದೆ ಎನ್ನುವುದನ್ನು ಬಹಿರಂಗವಾಗುವ ಸಾಧ್ಯತೆ ಇದೆ. ಶಾಸಕರಿಗೆ ಸರಿಯಾದ ಅನುದಾನ ಸಿಗುತ್ತಿಲ್ಲ ಎನ್ನುವ ವಿಚಾರವೂ ಆರೋಪವೂ ಇದೆ. ವರ್ಗಾವಣೆಗೆ ಸಚಿವರ ಆಪ್ತರು ಹಣ ಕೇಳುತ್ತಿರುವ ಆರೋಪವೂ ಸಭೆಯಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಬಿ.ಕೆ.ಹರಿಪ್ರಸಾದ್ ಬಂಡಾಯ ವಿಚಾರ ಕೂಡ ಕಾಂಗ್ರೆಸ್ ಪಕ್ಷದ ಬೇಗುದಿಗೆ ಕಾರಣವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್.ಕೆ ಪಾಟೀಲ್ ಕೆ. ಎಚ್. ಮುನಿಯಪ್ಪ ಮನವೊಲಿಕೆ ಪ್ರಯತ್ನ ಮಾಡಿದರೂ ಹರಿಪ್ರಸಾದ್ ಬೇಸರ ಕಡಿಮೆಯಾಗಿಲ್ಲ ಎನ್ನಲಾಗಿದೆ.