ಚಾರ್ಮಾಡಿ : ಸುರಿಯುತ್ತಿರುವ ಭಾರೀ ಮಳೆಗೆ ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಬಿದಿರುತಳ ಆಲೇಖಾನ್ ನಡುವಿನ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಗುಡ್ಡದ ಮಣ್ಣು ಕುಸಿತಗೊಂಡು ರಸ್ತೆಗೂ ಬಂದು ಬಿದ್ದು ವಾಹನಗಳು ಸಂಚರಿಸಲು ಅನಾನುಕೂಲವಾಯಿತು. ಇದರಿಂದ ಘಾಟಿ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಮುಂದುವರಿಯಿತು. ಗುಡ್ಡ ಕುಸಿದ್ದ ಉಂಟಾದ ಸ್ಥಳದ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯಾಗುತ್ತಿದ್ದು, ಈ ರಸ್ತೆ ಇಲ್ಲಿ ತೀವ್ರ ಅಗಲ ಕಿರಿದಾಗಿದೆ. ಇದು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ತಂದೊಡ್ಡಿ ಹಲವು ಕಾಲ ಟ್ರಾಫಿಕ್ ಜಾಮ್ ಮುಂದುವರಿಯಿತು.
ಬಳಿಕ ಚಿಕ್ಕಮಗಳೂರು ವಿಭಾಗದ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಯಿತು.
ಮಳೆಯಿಂದಾಗಿ ಗುಡ್ಡ ಕುಸಿತ ಪ್ರದೇಶದಲ್ಲಿ ಮತ್ತಷ್ಟು ಮಳೆ ನೀರು ಇಳಿದು ಬರುತ್ತಿದ್ದು ಇನ್ನಷ್ಟು ಕುಸಿತ ಸಂಭವಿಸಬಹುದಾದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಮಳೆ ನೀರಿನೊಂದಿಗೆ ಲಘು ಪ್ರಮಾಣದಲ್ಲಿ ಮಣ್ಣು ಕೂಡ ಕುಸಿತವಾಗದ ಸ್ಥಳದಲ್ಲಿ ಬರುತ್ತಿರುವುದು ಅಪಾಯಕಾರಿಯಾಗಿದೆ. ಈ ಗುಡ್ಡ ಇನ್ನಷ್ಟು ಕುಸಿದರೆ ಇಲ್ಲಿ ಸಂಚಾರಕ್ಕೆ ಭಾರಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಮುಂಜಾಗ್ರತೆಯೊಂದಿಗೆ ಅಗತ್ಯ ನೀರು, ಆಹಾರ ಕೊಂಡೊಯ್ಯುವುದು ಉತ್ತಮ.ರಾತ್ರಿ ಪ್ರಯಾಣವನ್ನು ಆದಷ್ಟು ಮುಂದೂಡುವುದು ಸೂಕ್ತ.