ಪುತ್ತೂರು : ಪುತ್ತೂರು ತಾಲೂಕಿನ ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಪಂಗಳಲ್ಲಿ ಸದಸ್ಯರಿಬ್ಬರ ನಿಧನದಿಂದ ತೆರವಾಗಿರುವ ಎರಡು ಸ್ಥಾನಗಳಿಗೆ ಸದಸ್ಯರ ಆಯ್ಕೆಗೆ ಮತದಾನ ಪ್ರಕ್ರಿಯೆ ಭಾನುವಾರ ಶಾಂತಿಯುತವಾಗಿ ನಡೆಯಿತು.
ಎರಡು ಪಂಚಾಯಿತಿಗಳಿಗೆ ತಲಾ ಒಂದು ಸ್ಥಾನಗಳಿಗೆ ಶಾಂತಿಯುತ ಮತದಾನ ನಡೆಯಿತು.
ಚುನಾವಣೆ ಅಂತಿಮ ಹಂತದಲ್ಲಿ ಆರ್ಯಾಪು ಗ್ರಾ.ಪಂ. ನಲ್ಲಿ 85.79 ಶೇ. ಹಾಗೂ ನಿಡ್ಪಳ್ಳಿ ಗ್ರಾ.ಪಂ.ನಲ್ಲಿ 87.14 ಶೇ. ಮತ ಚಲಾವಣೆಯಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಎರಡೂ ಕಡೆ ಸ್ಪರ್ಧಿಸುತ್ತಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎರಡು ಪಂಚಾಯಿತಿಗಳ ಎರಡು ಸ್ಥಾನಗಳಿಗೆ ಒಟ್ಟು ಆರು ಮಂದಿ ಅಂತಿಮ ಕಣದಲ್ಲಿದ್ದರು.
ನಿಡ್ಪಳ್ಳಿ ಗ್ರಾ.ಪಂ. ನ ಉಪ ಚುನಾವಣೆಯು ನಿಡ್ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಇಲ್ಲಿ 297 ಪುರುಷರು ಹಾಗೂ 310 ಮಹಿಳೆಯರು ಸೇರಿದಂತೆ ಒಟ್ಟು 607 ಮಂದಿ ಮತದಾರರಿದ್ದಾರೆ. ಆರ್ಯಾಪು ಗ್ರಾ.ಪಂ. ನ ಉಪ ಚುನಾವಣೆ ಕುಂಜೂರು ಪಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಇಲ್ಲಿ 634 ಪುರುಷರು, ೬೦೩ ಮಹಿಳೆಯರು ಸೇರಿದಂತೆ ಒಟ್ಟು 1237 ಮಂದಿ ಮತದಾನದ ಅವಕಾಶ ಹೊಂದಿದ್ದರು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ಪ್ರಕ್ರಿಯೆ ನಡೆಯಿತು.
ನಿಡ್ಪಳ್ಳಿ ಗ್ರಾ.ಪಂ.ನ ನಿಡಳ್ಳಿ ವಾರ್ಡ್ 2ರ ಸಾಮಾನ್ಯ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಂ. ಚಂದ್ರಶೇಖರ ಪ್ರಭು ಗೋಳಿತ್ತಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎನ್. ಸತೀಶ್ ಶೆಟ್ಟಿ ಬಾಕಿತ್ತಿಮಾರ್ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳಂಬೆತ್ತಿಮಾರ್ ಕಣದಲ್ಲಿದ್ದಾರೆ.
ಆರ್ಯಾಪು ಗ್ರಾ.ಪಂ.ನ ಆರ್ಯಾಪು ವಾರ್ಡ್-2ರ ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಗದೀಶ ಭಂಡಾರಿ ಗೆಣಸಿನಕುಮೇರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ. ಪುರುಷೋತ್ತಮ ಪ್ರಭು ಅಬ್ದುಗದ್ದೆ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಡ ಕಣದಲ್ಲಿದ್ದಾರೆ.