ವಿದ್ಯಾರಶ್ಮಿಯಲ್ಲಿ ಸಿಇಟಿ/ಜೆಇಇ/ನೀಟ್ ಕೋಚಿಂಗ್ ತರಗತಿಗೆ ಚಾಲನೆ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಇಂಟೆಗ್ರೇಟೆಡ್ ಸಿಇಟಿ/ಜೆಇಇ/ನೀಟ್ ಕೋಚಿಂಗ್ ತರಗತಿಗೆ ಶನಿವಾರ ಚಾಲನೆ ನೀಡಲಾಯಿತು.

ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ತರಗತಿ ಉದ್ಘಾಟಿಸಿ ಮಾತನಾಡಿ,  ಬದಲಾಗುತ್ತಿರುವ ಜಗತ್ತಿನೊಡನೆ ನಾವೂ ಬದಲಾಗಬೇಕಿದೆ. ಹೆಚ್ಚು ಹೆಚ್ಚು ಸ್ಪರ್ಧಾತ್ಮಕವಾಗಿರುವ ಇಂದಿನ ದಿನಮಾನದಲ್ಲಿ ನಾವು ಉತ್ತಮ ಸ್ಥಾನ ಗಿಟ್ಟಿಸಬೇಕಾದರೆ ಇಂತಹ ತರಬೇತಿಗಳನ್ನು ಅಗತ್ಯವಾಗಿ ಪಡೆಯಲೇ ಬೇಕು ಎಂದರು. ಇಷ್ಟು ದಿನ ಹಳ್ಳಿಯ ಕಾಲೇಜಾದ ನಮ್ಮಲ್ಲಿ ಇಂತಹ ತರಬೇತಿಯ ಸೌಲಭ್ಯ ಇಲ್ಲ ಎಂಬ ಕೊರಗು ಇತ್ತು. ಇಂದಿನ ದಿನ ಅಂತಹ ಕೊರಗು ಮುಕ್ತಾಯವಾಗಿದೆ. ನಮ್ಮ ವಿದ್ಯಾರ್ಥಿಗಳಿಗೆ ನಮ್ಮಲ್ಲೇ ಆಂತರಿಕ ವ್ಯವಸ್ಥೆಯೊಂದಿಗೆ ತರಬೇತಿ ನೀಡುವ ಕಾರ್ಯ ಇದಾಗಿದೆ ಎಂದು ಹೇಳಿ ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಆಡಳಿತಾಧಿಕಾರಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಯೋಜನೆಗೆ ತಮ್ಮನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಅವರು ಶ್ಲಾಘಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಇಂಜಿನಿಯರ್  ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ಮತ್ತು ಅದಕ್ಕೆ ತಯಾರಿಗಳ ವಿಧಾನಗಳನ್ನು ವಿಸ್ತೃತವಾಗಿ ವಿವರಿಸಿದರು. ಮುಂದಿನ ಆರು ವರ್ಷಗಳ ಕಾಲ ಕಷ್ಟಪಟ್ಟು ಓದಿ ಅಭ್ಯಾಸ ಮಾಡಿದರೆ ಜೀವನದ ಮುಂದಿನ ಅರುವತ್ತು ವರ್ಷಗಳ ಕಾಲ ಸುಖವಾಗಿರಬಹುದು ಎಂದು ಕಿವಿಮಾತು ಹೇಳಿದರು.































 
 

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಪ್ರಾಂಶುಪಾಲ ಸೀತಾರಾಮ ಕೇವಳ, ಉಪಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ, ಸಂಯೋಜಕಿ ಕಸ್ತೂರಿ ಕೆ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆಯಿಷತ್ ವಫಾ ಕಾರ್ಯಕ್ರಮ ನಿರೂಪಿಸಿದರು. ಎಂಟನೆ ತರಗತಿಯ ವೈಷ್ಣವಿ ಮತ್ತು ಬಳಗದವರು ಸಂಸ್ಕೃತ ಶ್ಲೋಕೋಚ್ಛಾರ, ದ್ವಿತೀಯ ಪಿಯುಸಿಯ ಗೌತಮಿ ಭಾರತೀಯ ಸಂವಿಧಾನ ಪೀಠಿಕೆಯ ವಾಚನ ಮಾಡಿದರು. ಫಾತಿಮತ್ ಸನಾ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ನಾಯಕ ದೀಪಕ್ ಬಿ.ಎಂ. ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top