ಪುತ್ತೂರು: ಪುತ್ತೂರು ಕುಲಾಲ ಸಮಾಜಸೇವಾ ಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ವಾರ್ಷಿಕ ಮಹಾಸಭೆ ಜು.23 ಭಾನುವಾರ ಬೆಳಿಗ್ಗೆ 11 ಕ್ಕೆ ಪುತ್ತೂರು ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಲಾಲ್ ಅವರಿಗೆ ಕುಲಾಲ ಕುಲತಿಲಕ ಪ್ರಶಸ್ತಿ ಹಾಗೂ ಮಂಗಳೂರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್ ಅವರಿಗೆ ಕುಲಾಲ ಕುಲಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಿವೃತ್ತ ಅಗ್ನಿಶಾಮಕ ಠಾಣಾಧಿಕಾರಿ ಎಂ.ಗೋಪಾಲ್ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೆ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಹೀಗೆ ಸಮಾಜದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ 28 ಅರ್ಜಿಗಳು ಈಗಾಗಲೇ ಬಂದಿದ್ದು, ವಿದ್ಯಾರ್ಥಿ ವೇತನ ವಿತರಿಸಲಾಗುವುದು. ಅಲ್ಲದೆ ಅತ್ಯಧಿಕ ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಅವರು ತಿಳಿಸಿದರು.
ಪುತ್ತೂರು ಕುಲಾಲ ಸಮಾಜಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ ಕರ್ನಾಟಕ ರಾಜ್ಯ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಮಂಗಳೂರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಿ.ಕೆ.ಬಾಬು, ಬೆಳ್ಳಾರೆ ಅಧ್ಯಕ್ಷ ಶೈಲೇಶ್ ನೆಟ್ಟಾರು, ರಾಮಕುಂಜದ ಮೋನಪ್ಪ ಕುಲಾಲ್ ಬೊಳ್ಳರೋಡಿ, ಪಾಣಾಜೆಯ ದಿವಾಕರ ಕುಲಾಲ್, ಕೌಡಿಚ್ಚಾರ್ ಕುಲಾಲ ಯುವ ವೇದಿಕೆ ಕಾರ್ಯದರ್ಶಿ ಬಾಲಕೃಷ್ಣ ಕೌಡಿಚ್ಚಾರು, ಚಾರ್ವಾಕ ಶಿರಾಡಿ ರಾಜನ್ ದೈವಸ್ಥಾನದ ಮೊಕ್ತೇಸರ ವಸಂತ ಕುಂಬಾರ, ಬನ್ನೂರು ಸಂಘದ ಅಧ್ಯಕ್ಷೆ ಗೀತಾ ಕಂಜೂರು, ಬಲ್ನಾಡಿನ ಚಂದ್ರಹಾಸ ಪದವು, ಕೆಯ್ಯೂರಿನ ಪ್ರಕಾಶ್ ಕುಲಾಲ್ ಕಟ್ಟತ್ತಾರು, ವೀರಮಂಗಲದ ಹೊನ್ನಪ್ಪ ಮೂಲ್ಯ, ಆರ್ಯಾಪಿನ ನಾರಾಯಣ ಮೂಲ್ಯ ಹಾಗೂ ಆಲಂಕಾರಿನ ಶೀಣಪ್ಪ ಕುಂಬಾರ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಸಮಾರಂಭದ ಬಳಿಕ ಮಧ್ಯಾಹ್ನ 2.30 ರಿಂದ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಚ್ಚಿದಾನಂದ ಡಿ., ಕಾರ್ಯದರ್ಶಿ ಜನಾರ್ದನ ಮೂಲ್ಯ ಸಾರ್ಯ ಉಪಸ್ಥಿತರಿದ್ದರು.