ಪುತ್ತೂರು: ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದು, ಇದಕ್ಕೆ ಪ್ರಾಮಾಣಿಕ ದಲಿತ ವರ್ಗವರು ಯಾರೂ ಇದಕ್ಕೆ ಕಿವಿಗೊಡಬಾರದು ಎಂದು ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ವಿಟ್ಲ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ರೀತಿಯ ಅಪಪ್ರಚಾರದ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಉತ್ತಮ ಕೆಲಸ ಮಾಡುವವರ ವಿರುದ್ಧ ಇಂತಹ ಇಲ್ಲಸಲ್ಲದ ಅಪಪ್ರಚಾರಗಳು ನಡೆಯುತ್ತಿರುತ್ತವೆ. ಇದಕ್ಕೆ ಕಾನೂನು ಹೋರಾಟದ ಮೂಲಕ ಉತ್ತರ ಕೊಡುತ್ತೇವೆ. ಒಂದು ವೇಳೆ ಕಾನೂನು ಹೋರಾಟವೂ ಸಾಕಾಗದೇ ಹೋದರೆ, ಯಾವುದೇ ತ್ಯಾಗಕ್ಕೂ ಸಿದ್ಧರಾಗಿ ಬೆದ್ರಕಾಡು ಅವರ ಪರವಾಗಿ ನಿಲ್ಲುವುದಾಗಿ ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ ನ್ಯಾಯದ ಪರವಾಗಿ ಕಾನೂನು ಮೀರದೆ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಪ.ಜಾತಿ / ಪ. ಪಂಗಡದವರ ಮೂಲಭೂತ ಹಕ್ಕುಗಳಿಗೋಸ್ಕರ ಮಾಡುತ್ತಿರುವ ಕೆಲಸ ಕಾರ್ಯಗಳಿಗೆ ಎಲ್ಲೆಡೆಯಿಂದ ಪ್ರೋತ್ಸಾಹ ಸಿಕ್ಕಿದೆ. 2006 ರಿಂದಲೂ ಸಮಾಜಮುಖಿ ಕೆಲಸಗಳಾದ ಕುಡಿಯುವ ನೀರು, ವಿದ್ಯುತ್, ರಸ್ತೆ, ಬಡವರ್ಗದವರ ಜಮೀನು ಅತಿಕ್ರಮಣ ತೆರವು ಮೊದಲಾದ ಕಾರ್ಯಗಳ ಬಗ್ಗೆ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಲ್ಲದೇ, ನಿವೃತ್ತ ಸೈನಿಕರಿಗೆ ಜಮೀನು ದೊರಕಿಸಿಕೊಟ್ಟ ಎಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ವಿಟ್ಲದಿಂದ ಮಂಗಳೂರು ತನಕ ಕಾಲ್ನಾಡಿಗೆ ಜಾಥಾ ಮಾಡಿ ನಿವೃತ್ತ ಸೈನಿಕರಿಗೆ ಜಮೀನು ಕಾಯ್ದಿರಿಸುವಲ್ಲಿ ಬೆದ್ರಕಾಡುರವರ ಅವಿರತ ಪ್ರಯತ್ನ ಇದೆ. ಎಷ್ಟೋ ಜನ ಅನಾರೋಗ್ಯ ಪೀಡಿತರಿಗೆ ಸಂಘಟನೆ ಮೂಲಕ ಸಹಾಯಧನ ನೀಡಿ, ಮಾನವೀಯತೆ ಮೆರೆದಿದ್ದಾರೆ. ದಲಿತರ ಪರವಾಗಿ ಕೆಲಸ ಮಾಡುವ ಪ್ರಾಮಾಣಿಕ ನಾಯಕ ಸೇಸಪ್ಪ ಬೆದ್ರಕಾಡು. ಸೌಜನ್ಯ ಹಾಗೂ ಆತ್ಮಿಕಾ ಮೊದಲಾದವರ ಹತ್ಯೆ ನಡೆದಾಗ ಯಾವುದೇ ಜಾತಿ, ಮತ ನೋಡದೇ ಧ್ವನಿ ಎತ್ತಿದ ನಾಯಕನೂ ಹೌದು. ಆದ್ದರಿಂದ ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಪಪ್ರಚಾರಗಳನ್ನು ಯಾರೂ ಗಣನೆಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸೋಮಪ್ಪ ನಾಯ್ಕ, ಸಂಘಟನಾ ಕಾರ್ಯದರ್ಶಿ ಧನಂಜಯ ಬಲ್ನಾಡು, ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಮಹಿಳಾ ಘಟಕದ ಉಪಾಧ್ಯಕ್ಷೆ ಯಾಮಿನಿ ಬೆಟ್ಟಂಪಾಡಿ ಉಪಸ್ಥಿತರಿದ್ದರು.