ಪುತ್ತೂರು: ಗ್ರಾಮ ವಿಕಾಸ ಕಾರ್ಯಕ್ರಮ ಒಂದು ಉತ್ತಮ ಯೋಜನೆಯಾಗಿದ್ದು ಗ್ರಾಮೀಣ ಭಾಗಗಳ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ದಿಗೆ ತುಂಬಾ ಸಹಕಾರಿಯಾಗಿದೆ ಎಂದು ಕುಳ ಗ್ರಾಮದ ಓಜಾಲ ಸರ್ಕಾರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ .ಪಿ ಹೇಳಿದರು
ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ಮತ್ತು ಎಂಸಿಎ ವಿಭಾಗದ ಆಶ್ರಯದಲ್ಲಿ ಓಜಾಲ ಪ್ರಾಥಮಿಕ ಶಾಲೆಯಲ್ಲಿ ನಡೆದ ಔಷಧೀಯ ಸಸ್ಯಗಳ ಪರಿಚಯ ಮತ್ತು ಸಂರಕ್ಷಣೆಯ ವಿಶೇಷ ಕಾರ್ಯಕ್ರಮ ವಿವೇಕ ಸಂಜೀವಿನಿಗೆ ಚಾಲನೆ ನೀಡಿ ಮಾತಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಮಾತನಾಡಿ, ನಮ್ಮ ಸುತ್ತಮುತ್ತ ವಿವಿಧ ಪ್ರಬೇಧಗಳ ಔಷಧೀಯ ಸಸ್ಯಗಳಿದ್ದು ಅದರ ಪರಿಚಯವೇ ಇಲ್ಲದಾಗಿದೆ. ಇಂದಿನ ಯುವಜನತೆಗೆ ಅದರ ಅರಿವು ಮೂಡಿಸುವುದರ ಜತೆಯಲ್ಲಿ ಉಪಯೋಗವನ್ನೂ ತಿಳಿಸಿಕೊಡುವ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮ ಇದಾಗಿದೆ. ಇದರ ಪರಿಣಾಮಕಾರಿ ಅನುಷ್ಟಾನಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಸ್ಠಳೀಯ ನಾಟಿವೈದ್ಯ ಪೂವಪ್ಪ ಏಮಾಜೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು , ಆಧುನಿಕ ಜೀವನದ ಭರಾಟೆಯಲ್ಲಿ ಕಾಡುಗಳು ನಶಿಸಿ ಹೋಗುತ್ತಿವೆ,ಇಂದಿನ ಯುವ ಪೀಳಿಗೆಗೆ ನಮ್ಮ ಸುತ್ತ ಇರುವ ಗಿಡಗಳ ಪರಿಚಯವೇ ಇಲ್ಲ. ಹೀಗಾಗಿ ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ, ಬೆಳೆಸುವ, ಸಂರಕ್ಷಿಸುವ ಕೆಲಸ ಆಗಬೇಕು ಎಂದರು. ಈ ನಿಟ್ಟಿನಲ್ಲಿ ಕಾಲೇಜು ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದರು.
ಓಜಾಲ ಶಾಲೆಯ ಮುಖ್ಯಶಿಕ್ಷಕ ಸಂಜೀವ.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ ಸ್ವಾಗತಿಸಿದರು. ಗ್ರಾಮವಿಕಾಸ ಯೋಜನೆಯ ಸಂಚಾಲಕಿ ಡಾ.ಸೌಮ್ಯ.ಎನ್.ಜೆ ಪ್ರಸ್ತಾವನೆಗೈದರು. ಎಂಬಿಎ ವಿಭಾಗದ ಡಾ.ರೋಬಿನ್ ಶಿಂಧೆ ವಂದಿಸಿದರು. ಪ್ರೊ.ನೀಮಾ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಓಜಾಲ ಶಾಲೆ ಮತ್ತು ಅಂಗನವಾಡಿ ಪರಿಸರದಲ್ಲಿ ಔಷಧೀಯ ಗಿಡಗಳನ್ನು ನೆಡಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಮಿಕ್ಕಿ ಗ್ರಾಮಸ್ಥರು ಪಾಲ್ಗೊಂಡರು.
ಇಲೆಕ್ಟ್ರಾನಿಕ್ಸ್ ತ್ಯಾಜ್ಯದ ಬಗ್ಗೆ ಮತ್ತು ಅದನ್ನು ವಿಲೇವಾರಿ ಮಾಡುವ ಕುರಿತು ವಿದ್ಯಾರ್ಥಿಗಳಲ್ಲಿ ಮತ್ತು ಹೆತ್ತವರಲ್ಲಿ ಅರಿವು ಮೂಡಿಸುವುದಕ್ಕಾಗಿ ಎಂಸಿಎ ವಿಭಾಗದ ವಿದ್ಯಾರ್ಥಿಗಳು ನಾಟಕ ಹಾಗೂ ಮೈಮ್ ಪ್ರದರ್ಶನವನ್ನು ನೀಡಿದರು.
ಎಂಬಿಎ ಮತ್ತು ಎಂಸಿಎ ವಿಭಾಗದ ವಿದ್ಯಾರ್ಥಿಗಳು ತಾವು ಉಳಿಸಿದ ಕಿರು ಮೊತ್ತವನ್ನು ಸಮಾಜಕ್ಕೆ ವಿನಿಯೋಗಿಸುವ ದಾನೋತ್ಸವ ಕಾರ್ಯಕ್ರಮವನ್ನೂ ಈ ಸಂದರ್ಭದಲ್ಲಿ ನಡೆಸಲಾಯಿತು. ಒಜಾಲ ಪ್ರಾಥಮಿಕ ಶಾಲೆಗೆ ಬೇಕಾದ ಅಗತ್ಯ ಪರಿಕರಗಳು ಹಾಗೂ ಕುಳ ಗ್ರಾಮದ ಬಡ ಕುಟುಂಬವೊಂದಕ್ಕೆ ಬೇಕಾದ ಗೃಹೋಪಯೋಗಿ ಪರಿಕರಗಳನ್ನು ವಿತರಿಸಲಾಯಿತು.