ಪುತ್ತೂರು: ಪುತ್ತೂರು ಯುವ ಬಂಟರ ಸಂಘದ ಆಶ್ರಯದಲ್ಲಿ ಬಂಟ ದಿನಾಚರಣೆ ಪ್ರಯುಕ್ತ “ತುಳುನಾಡ ಬಂಟೆರೆ ಪರ್ಬ-2023” ಸಾಂಸ್ಕೃತಿಕ ಕಾರ್ಯಕ್ರಮ ಜು.23 ಭಾನುವಾರ ಬಂಟರ ಭವನದಲ್ಲಿ ನಡೆಯಲಿದೆ ಎಂದು ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಆಯ್ದ 8 ತಂಡಗಳಿಗೆ ಪಾಲ್ಗೊಳ್ಳಲು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಫ್ಯಾಶನ್ ಶೋ, ಫಿಲ್ಮ್ ಡ್ಯಾನ್ಸ್, ಸೋಲೋ ಡ್ಯಾನ್ಸ್, ಕ್ಲಾಸಿಕಲ್ ಡ್ಯಾನ್ಸ್ ಹೀಗೆ ಹಲವು ಸ್ಪರ್ಧೆಗಳು ನಡೆಯಲಿದ್ದು, ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ ನಿರಂತರವಾಗಿ ನಡೆಯಲಿದೆ. ಅಲ್ಲದೆ ಬಂಟಸ್ಮೃತಿ ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿದ್ದ, ಬಂಟರ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಿದ್ದ ಡಾ.ಮುಂಡಾಳಗುತ್ತು ತಿಮ್ಮಪ್ಪ ರೈ ಹಾಗೂ ಜಯಕರ್ನಾಟಕ ಸಂಸ್ಥಾಪಕ ಎನ್.ಮುತ್ತಪ್ಪ ರೈ ಅವರಿಗೆ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ಎನ್.ಮುತ್ತಪ್ಪ ರೈ ಕುಟುಂಬಸ್ಥರು ಮಾಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಹೈಕೋರ್ಟ್ ನ್ಯಾಯಾಧೀಶರಾದ ಸವಣೂರು ವಿಶ್ವಜೀತ್ ಶೆಟ್ಟಿಯವರು ಸಮಾಜದ ಪರವಾಗಿ ಗೌರವ ಸ್ವೀಕರಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ಉದ್ಘಾಟಿಸಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮುಂಬಯಿ ಹೇರಂಭಾ ಗ್ರೂಪ್ ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಇಂಟರ್ ನ್ಯಾಷನಲ್ ಸಿವಿಲ್ ಸರ್ವೆಂಟ್ ನಿತ್ಯಾನಂದ ಶೆಟ್ಟಿ, ಮುಂಬಯಿ ನಿವೃತ್ತ ಡೆಪ್ಯೂಟಿ ಕಮೀಷನರ್ ಶಾರ್ಪ್ ಶೂಟರ್ ಖ್ಯಾತಿಯ ಪ್ರಕಾಶ್ ಭಂಡಾರಿ, ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತೆ ವಾಣಿ ಎಸ್.ಆಳ್ವ, ಗುಣರಂಜನ್ ಶೆಟ್ಟಿ, ಪ್ರಕಾಶ್ ರೈ ದೇರ್ಲ, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರಮುಖ ಆಕರ್ಷಣೆಯಾಗಿ ಬಂಟ ತಾರೆಯರಾದ ವಿಜಯ ಕುಮಾರ್ ಕೊಡಿಯಾಲಬೈಲ್, ರೂಪೇಶ್ ಶೆಟ್ಟಿ, ರಚನಾ ಶೆಟ್ಟಿ, ಯಶ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿಶಾಂತ್ ರೈ ಮಠಂತಬೆಟ್ಟು, ಪ್ರಸಾದ್, ಪ್ರೊ.ಕಬಡ್ಡಿ ಆಟಗಾರ ಪ್ರಶಾಂತ್ ರೈ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಮೊದಲ ದಿನ ಶನಿವಾರ ಬೆಳಗ್ಗೆ ಗಣಹೋಮ ಹಾಗೂ ಶ್ರೀ ಸತ್ಯಾರಾಯಣ ಪೂಜೆ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕರಾದ ಭಾಗ್ಯೇಶ್ ರೈ, ಹರ್ಷ ಕುಮಾರ್ ರೈ ಮಾಡಾವು, ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಶೆಟ್ಟಿ ಕೆ.ಸಿ. ಉಪಸ್ಥಿತರಿದ್ದರು.