ಪುತ್ತೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಂಕಲ್ಪದಂತೆ ಅಮೇರಿಕಾ ಸಂಯುಕ್ತ ಸಂಸ್ಥಾನದ ನ್ಯೂಜೆರ್ಸಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ದೇವಸ್ಥಾನದ ನಿರ್ಮಾಣ ಕಾರ್ಯದ ಪ್ರಗತಿ ಪರಿಶೀಲನೆಗಾಗಿ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಇಂದು ನ್ಯೂಜೆರ್ಸಿಯಲ್ಲಿರುವ ಶಾಖಾ ಮಠಕ್ಕೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರೂ ತೆರಳುತ್ತಿದ್ದಾರೆ.
ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಶ್ರೀ ಮಠದ ಭಾರತೀಯ ಭಕ್ತದ ದಶಕಗಳ ಅಭಿಲಾಷೆಯಂತೆ 2012 ರಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ನ್ಯೂಜೆರ್ಸಿಯಲ್ಲಿ ಶ್ತೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯನ್ನು ಪ್ರಾರಂಭಿಸಿದ್ದರು. ಸುಮಾರು 20 ಎಕ್ರೆ ವಿಸ್ತೀರ್ಣ ಪ್ರದೇಶದಲ್ಲಿ ಸುಂದರವಾದ ಶ್ರೀ ಮಠದ ಶಾಖಾ ಕಟ್ಟಡವಿದ್ದು, ಕಳೆದ ಒಂದು ದಶಕದಿಂದಲೂ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ.
ಎರಡು ವಾರಗಳ ಕಾಲ ಪರಮಪೂಜ್ಯ ಮಹಾಸ್ವಾಮೀಜಿಯವರು ಭೇಟಿ ಸಂದರ್ಭ ಅಮೇರಿಕ ಸಂಸ್ಥಾನದ ಹಲವಾರು ರಾಜ್ಯಗಳಿಗೆ ಭೇಟಿ ನೀಡಲಿದ್ದು, ಧಾರ್ಮಿಕ, ಆಧ್ಯಾತ್ಮಿಕ ಸತ್ಸಂಗಗಳ ಮೂಲಕ ಭಕ್ತರನ್ನು ಹರಸಲಿದ್ದಾರೆ.