ಬೆಂಗಳೂರು : ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪರಸ್ಪರ ಕಚ್ಚಾಡಿಕೊಂಡಿದ್ದ ಜೆಡಿಎಸ್ ಮತ್ತು ಬಿಜೆಪಿ ನಡುವೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೈತ್ರಿ ಏರ್ಪಡುವ ಸಾಧ್ಯತೆಗಳು ದಟ್ಟವಾಗಿವೆ.
ಈ ಮೂಲಕ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಯಾರೂ ಶಾಶ್ವತ ಮಿತ್ರರೂ ಅಲ್ಲ ಎಂಬ ಹಳೇ ಗಾದೆ ಮಾತಿಗೆ ಮತ್ತೊಂದು ನಿದರ್ಶನ ಕರ್ನಾಟಕದಲ್ಲೆ ತಯಾರಾಗುತ್ತಿದೆ.
ಬಿಜೆಪಿಯನ್ನು ಕಟ್ಟಿಹಾಕಲು ಮಹಾಘಟಬಂಧನ್ ನಾಯಕರು ಬೆಂಗಳೂರಿನಲ್ಲಿ ಇಂದಿನಿಂದ ಒಗ್ಗಟ್ಟು ಪ್ರದರ್ಶನಕ್ಕೆ ಸಜ್ಜಾಗಿದ್ದಾರುವಂತೆಯೇ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಜತೆ ಸಖ್ಯ ಬೆಳೆಸಲು ದಿಲ್ಲಿಗೆ ತೆರಳಲಿದ್ದಾರೆ. ತೆನೆ ಹೊತ್ತ ಮಹಿಳೆ ಬಹುತೇಕ ಕಮಲ ಮುಡಿಯೋದು ಫಿಕ್ಸ್ ಆಗಿದ್ದು, ದಿಲ್ಲಿಯಲ್ಲಿ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ. ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ. ಈ ಪೈಕಿ ಜೆಡಿಎಸ್‌ಗೂ ಗಾಳ ಹಾಕಿದೆ. ಕುಮಾರಸ್ವಾಮಿ ಸಹ ಬಿಜೆಪಿ ಜತೆ ಮೈತ್ರಿಗೆ ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ದಿಲ್ಲಿ ಸಭೆ ಬಳಿಕ ಮೈತ್ರಿ ಬಹುತೇಕ ಫಿಕ್ಸ್ ಆಗಲಿದೆ. ಈಗಾಗಲೇ ಮಹಾರಾಷ್ಟ್ರದ 2 ಶಿವಸೇನೆಯ ಏಕನಾಥ್ ಶಿಂಧೆ ಬಣ, ಎನ್‌ಸಿಪಿಯ ಅಜಿತ್ ಪವಾರ್ ಬಣ ಎನ್‌ಡಿಎ ಕಡೆ ವಾಲಿವೆ. ಹಳೇ ಮಿತ್ರಪಕ್ಷಗಳಾದ ಶಿರೋಮಣಿ ಅಖಾಲಿದಳ, ತೆಲುಗುದೇಶಂ ಪಾರ್ಟಿಗೂ ನಡ್ಡಾ ಆಹ್ವಾನ ಹೋಗಿದೆ. ಹೊಸ ಪಕ್ಷ ಪವನ್ ಕಲ್ಯಾಣ್ ಜನಸೇನಾ ಕೂಡಾ ಎನ್‌ಡಿಎ ಜತೆ ಗುರುತಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಕುಮಾರಸ್ವಾಮಿ ಈವರೆಗೆ ತಮ್ಮ ನಡೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಬಿಜೆಪಿ ನಾಯಕರು ಸಣ್ಣ ಸುಳಿವು ಕೊಟ್ಟಿದ್ದಾರೆ.