ಇಂದು ತುಳುನಾಡಿನ ವಿಶೇಷ ಆಚರಣೆ ಆಟಿ ಅಮವಾಸ್ಯೆ | ಔಷಧೀಯ ಗುಣವುಳ್ಳ ಪಾಲೆ ಮರದ ಸೇವನೆಗೆ ವಿಶೇಷ ದಿನ

ಪುತ್ತೂರು: ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಆಚರಿಸುವ ಅಮಾವಾಸ್ಯೆಯಾಗಿದೆ. ಈ ಅಮಾವಾಸ್ಯೆಯನ್ನು ಆಷಾಡ ಅಮಾಸೆ , ದೀವಿಗೆ ಕರ್ನಾಟಕ ಅಮಾವಾಸ್ಯೆ ಅಥವಾ ಮನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆಟಿ ಆಚರಣೆಯ ಮೂಲಕ ಮುಂದಿನ ಹಬ್ಬಗಳಿಗೆ ಮುನ್ನುಡಿ ಇಟ್ಟಂತೆ. ಮುಂದಿನ ಹಬ್ಬಗಳು ಸಾಲು ಸಾಲಾಗಿ ಆಚರಣೆಗೊಳ್ಳಲಿವೆ.

ಆಟಿ ತಿಂಗಳಲ್ಲಿ ಬರುವ ಈ ಅಮಾವಸ್ಯೆಯು ತುಳುವ ಜನರಿಗೆ ವಿಶೇಷವಾದ ದಿನ ಹಾಗೂ ಇದು ಹಿಂದಿನಿಂದಲೂ ಆಚರಿಸುತ್ತಾ ಬಂದಿರುವ ಆಚರಣೆಯಾಗಿದೆ.

ಪಾಲೆ ಮರದ ಕಷಾಯ :































 
 

ತುಳುನಾಡಿನಲ್ಲಿ ಆಟಿಯ ಅಮವಾಸ್ಯೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ದಿನ ಪಾಲೆಯ ರಸದ ಕಷಾಯ ಕುಡಿಯುವುದರಿಂದ ಒಂದು ವರ್ಷಕ್ಕೆ ಬೇಕಾದ ರೋಗ ನಿರೋಧಕ ಶಕ್ತಿ ದೊರೆಯುತ್ತದೆ ಎನ್ನಲಾಗುತ್ತದೆ. ಪಾಲೆ ಮರ ಅಂದರೆ ಹಾಲೆ ಮರವು ಒಂದು ರೀತಿಯಲ್ಲಿ ಹಾಲಿನ ರೂಪದಲ್ಲಿ ರಸ ಕೊಡುವ ಮರವಾಗಿದೆ. ಆಟಿ ಅಮವಾಸ್ಯೆಯ ದಿನ ಈ ಮರದಲ್ಲಿ ಒಂದು ವರ್ಷಕ್ಕೆ ಬೇಕಾದ ಮದ್ದಿನ ಅಂಶವನ್ನು ಹೊಂದಿರುತ್ತದೆ ಎನ್ನುತ್ತಾರೆ ಮತ್ತು ಈ ದಿನ ಈ ಮರದಲ್ಲಿ ದೈವಿಕ ಕಲೆಯಿರುತ್ತದೆ ಎಂಬ ನಂಬಿಕೆಯಿದೆ.

ಪಾಲೆ ಮರದ ತೊಗಟೆಯನ್ನು ಯಾರು ತರಬೇಕೆಂದು ಹಿಂದಿನ ದಿನವೆ ನಿರ್ಧರಿಸುತ್ತಾರೆ. ಅವರು ಹಿಂದಿನ ಸಂಜೆ ಹೋಗಿ ಮರವನ್ನು ಪತ್ತೆ ಹಚ್ಚಿ ಅದಕ್ಕೆ ಗುರುತನ್ನು ಹಾಕಿ ಬರುತ್ತಾರೆ. ಮತ್ತು ಸೂರ್ಯೋದಯಕ್ಕೂ ಮೊದಲು ಆ ವ್ಯಕ್ತಿ ಆ ಮರದ ಕೆತ್ತೆಯನ್ನು ತರುತ್ತಾನೆ. ಮರದ ಕೆತ್ತೆಯನ್ನು ಕಲ್ಲಿನಿಂದ ಕೆತ್ತಿ ತೆಗೆಯಲಾಗುತ್ತದೆ.

ತಂದ ಮರದ ತೊಗಟೆಯನ್ನು ಓಮ, ಬೆಳ್ಳುಳ್ಳಿ, ಅರಶಿನ, ಕರಿ ಮೆಣಸು ಹಾಕಿ ಅರೆಯುವ ಕಲ್ಲಿನಲ್ಲಿ ಅರೆದು ರಸ ತೆಗೆಯುತ್ತಾರೆ. ಇವುಗಳನ್ನು ಬೆರೆಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೀಗೆ ತೆಗೆದ ರಸಕ್ಕೆ ಬೊರ್ಗಲ್ ಕಲ್ಲನ್ನು (ಬೆಣಚು ಕಲ್ಲು) ಬಿಸಿ ಮಾಡಿ ಅದನ್ನು ಆ ರಸಕ್ಕೆ ಹಾಕಿ ಒಂದು ರೀತಿಯ ಒಗ್ಗರಣೆ ನೀಡುತ್ತಾರೆ.

ಈ ರಸ ಔಷದೀಯ ಗುಣವನ್ನು ಹೊಂದಿದ್ದರೂ ಅದನ್ನು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಮತ್ತು ಇದನ್ನು ಸಮತೋಲನಗೊಳಿಸಲು ಮೆಂತ್ಯೆಯ ಗಂಜಿಯನ್ನು ಸೇವಿಸುತ್ತಾರೆ. ಅಲ್ಲದೆ ಕೆಲವರು ಕೆಸುವಿನ ಎಲೆಯಿಂದ ಮಾಡಿದ ಪತ್ರೊಡೆಯನ್ನು ಸೇವಿಸುತ್ತಾರೆ.

ನಗರದ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ 40 ಕ್ಕೂ ಅಧಿಕ ವರ್ಷಗಳಿಂದ ಪಾಲೆ ಮರದ ಕಷಾಯ ಸಾರ್ವಜನಿಕವಾಗಿ ನೀಡುತ್ತಾ ಬಂದಿದ್ದಾರೆ. ಈ ವರ್ಷವೂ ಸಂಪ್ರದಾಯದಂತೆ ಕಷಾಯ ವಿತರಿಸಿದ್ದು, ಬೆಳಗ್ಗೆ ವಿಶೇಷ ಪೂಜೆ ಬಳಿಕ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಗೆ ಕಷಾಯ ವಿತರಿಸಲಾಯಿತು. ಜಾತಿ-ಧರ್ಮ ಬೇಧವಿಲ್ಲದೆ ಎಲ್ಲರೂ ಮಠಕ್ಕೆ ಆಗಮಿಸಿ ಕಷಾಯ ಪಡೆದುಕೊಂಡರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top