ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಂತ ಫಿಲೋಮಿನಾ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಜಯಂತ್ ನಡುಬೈಲು ಅವರನ್ನು ಕಾಲೇಜಿನ ಸಂಚಾಲಕ ಲಾರೆನ್ಸ್ ಮಸ್ಕರೇನ್ಹಸ್ ಹೂಗುಚ್ಛ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ ಉಪಸ್ಥಿತರಿದ್ದರು.
ಜಯಂತ ನಡುಬೈಲು ಅವರು 1993 ರಲ್ಲಿ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಕಾಂ ಪದವಿ ಗಳಿಸಿದ್ದರು. ಬಳಿಕ ಖಾಸಗಿ ಉದ್ಯೋಗ ಮಾಡುವ ಮೂಲಕ ಉದ್ಯೋಗ ಜೀವನ ನಡೆಸಿ 2002 ರಲ್ಲಿ ಉದ್ಯಮ ಜೀವನಕ್ಕೆ ಕಾಲಿಟ್ಟರು. ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷರಾಗಿ, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷರಾಗಿ, ಹಲವು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ, ಕೋಟಿ-ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದ ಅಧ್ಯಕ್ಷರಾಗಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಅವರ ಸೇವಾ ಕಾರ್ಯವನ್ನು ಗುರುತಿಸಿ ಜೆಸಿಐ ಸಂಸ್ಥೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸುಮಾರು 50 ರಷ್ಟು ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಅವರ ಸಂಪೂರ್ಣ ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತಿದ್ದಾರೆ.