ಪುತ್ತೂರು: ಶಾಲೆ ಅಥವಾ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಪ್ರಕೃತಿದತ್ತ ಗಿಡ-ಬಳ್ಳಿಗಳ ಪಾತ್ರ ಮಹತ್ವದ್ದಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಶಾಲೆಯೊಂದರಲ್ಲಿ ಹೂವಿನ ಬಳ್ಳಿಯೊಂದನ್ನು ಶಾಲಾ ಸಭಾ ವೇದಿಕೆಗೆ ಹರಡಿ ಬಿಟ್ಟಿದ್ದು ಇದು ಎಂತವರನ್ನೂ ಆಕರ್ಷಿಸುವಂತಿದೆ.
ಪುತ್ತೂರು ತಾಲೂಕಿನ ಕೆಯ್ಯೂರು ಕೆಪಿಎಸ್ ಶಾಲೆಯಲ್ಲಿ ಸಭಾ ವೇದಿಕೆಯ ಎರಡೂ ಬದಿಗಳಲ್ಲಿ ಈ ಬಳ್ಳಿಗಳನ್ನು ಬಿಡಲಾಗಿದ್ದು, ಅದು ಇಡೀ ವೇದಿಕೆಯನ್ನು ಹರಡಿಕೊಂಡು ಹಸಿರಿನಿಂದ ಕೂಡಿದೆ.
ಹಿಂದೆ ಈ ಶಾಲೆಯಲ್ಲಿ ಫ್ಯಾಶನ್ ಫ್ರೂಟ್ ಬಳ್ಳಿಗಳನ್ನು ಇದೇ ವೇದಿಕೆಗೆ ಬಿಡಲಾಗಿತ್ತು. ಆದರೆ ಅದು ಹೆಚ್ಚು ವರ್ಷ ಬದುಕದೇ ಇರುವುದರಿಂದ ಅದರ ಬದಲಿಗೆ ಗಡಿಯಾರ ಹೂವಿನ ಬಳ್ಳಿಗಳನ್ನು ಬಿಟ್ಟಿದ್ದಾರೆ.
ಪ್ರಸ್ತುತ ಆಧುನಿಕ ಯುಗದಲ್ಲಿ ಮಾನವ ನಿರ್ಮಿತ ಪ್ಲಾಸ್ಟಿಕ್ ಬಳ್ಳಿಗಳನ್ನು ಮನೆಯ ಅಂದಕ್ಕಾಗಿ ಬಳಸುವುದು ಹೆಚ್ಚಿನ ಕಡೆಗಳಲ್ಲಿ ಕಂಡು ಬರುತ್ತಿದೆ. ಅಳವಡಿಸುವುದು ಸಾಮಾನ್ಯ. ಆದರೆ ಈ ಶಾಲೆಯಲ್ಲಿ ಪ್ರಕೃತಿದತ್ತವಾಗಿ ಈ ಗಡಿಯಾರ ಹೂವಿನ ಬಳ್ಳಿಗಳನ್ನು ಬಿಡಲಾಗಿದ್ದು, ಸಂಪೂರ್ಣ ಛಾವಣಿಯಾಗಿ ಬಳ್ಳಿಗಳನ್ನು ಆಶ್ರಯಿಸಿದೆ. ಈ ಮೂಲಕ ಶಾಲಾ ಅಂದವನ್ನು ಹೆಚ್ಚಿಸಿರುವುದು ಆಕರ್ಷಣಿಯವಾಗಿ ಕಾಣುತ್ತಿದೆ.
ಈ ಶಾಲೆಗೆ ಯಾರೇ ಬರಲಿ ಈ ಬಳ್ಳಿಗಳನ್ನು ಆಶ್ರಯಿಸಿಕೊಂಡಿರುವ ರಂಗ ಮಂದಿರವನ್ನು ಒಂದು ಕ್ಷಣ ತದೇಕಚಿತ್ತದಿಂದ ನೋಡಿ ಅದರ ಅಂದವನ್ನು ವೀಕ್ಷಿಸುತ್ತಾರೆ. ಇಂತಹಾ ಬಳ್ಳಿಯಿಂದ ಆವೃತವಾದ ರಂಗ ಮಂದಿ ಕಾಣುವುದು ಅಪರೂಪ.
ಹಸಿರು ಬಳ್ಳಿಯಿಂದ ಉತ್ತಮ ಆಮ್ಲಜನಕ ಉತ್ಪತ್ತಿಗೆ ಸಹಕಾರಿಯಾಗಿದೆ :
ತೆರೆದ ಸಭಾ ವೇದಿಕೆಗೆ ಆಗಿರುವುದರಿಂದ ಬಿಸಿಲು ಬೀಳುತ್ತಿತ್ತು. ಮೊದಲಿಗೆ ಶೀಟು ಅಳವಡಿಸುವ ಯೋಜನೆಯಿತ್ತು. ಆದರೆ ಶಾಲಾ ಪಕ್ಕದಲ್ಲಿರುವ ಹೊಟೇಲ್ ನವರ ಮನೆಯೊಂದಕ್ಕೆ ಈ ರೀತಿ ಬಳ್ಳಿಗಳನ್ನು ಬಿಟ್ಟಿದ್ದರು. ಅದನ್ನು ತಂದು ಸಭಾ ವೇದಿಕೆಯ ಎರಡೂ ಕಡೆಗಳಿಗೆ ಬಿಟ್ಟೆವು. ಇದೀಗ ಇಡೀ ವೇದಿಕೆಯನ್ನು ಬಳ್ಳಿ ಆವರಿಸಿ ಹಸಿರು ಹೊದಿಕೆಯಂತಾಗಿದೆ. ಈ ಹಸಿರು ಬಳ್ಳಿಗಳಿಂದ ವೇದಿಕೆಗೆ ತಂಪಿನ ಜತೆ ಆಮ್ಲಜನಕ ಉತ್ಪತ್ತಿಗೂ ಸಹಕಾರಿಯಾಗಿದೆ ಎಂದು ಹೇಳುತ್ತಾರೆ ಕೆಯ್ಯೂರು ಕೆಪಿಎಸ್ ಸ್ಕೂಲ್ ನ ಉಪಪ್ರಿನ್ಸಿಪಾಲ್ ವಿನೋದ್ ಕುಮಾರ್.