ಪುತ್ತೂರು: ಅಕ್ಷರದಾಸೋಹ ಯೋಜನೆ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮವಾಗಿದ್ದರೂ, ಬಿಸಿಯೂಟ ತಯಾರಿಸುವ ಕಾರ್ಮಿಕರ ಬದುಕಿಗೆ ತಕ್ಕ ರಕ್ಷಣೆ, ಭದ್ರತೆ ದುಡಿಮೆಗೆ ತಕ್ಕ ವೇತನ ಇಲ್ಲದೆ ಅವರ ಬದುಕೇ ಬಿಸಿಯಾಗುವಂತಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಹೇಳಿದರು.
ಅವರು ಪುತ್ತೂರು ಎಸಿ ಕಚೇರಿ ಎದುರು ನಡೆದ ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರದಾಸೋಹ ನೌಕರರ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದರು.
ಜನರ ಬದುಕಿನ ಬಗ್ಗೆ ಕಾಳಜಿಯೇ ಇಲ್ಲದ ಬಿಜೆಪಿ ಸರಕಾರವನ್ನು ಜನ ಕಿತ್ತೆಸಿದಿದ್ದರೂ ಈಗ ಅದಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರವಾದರೂ ಬಿಸಿಯೂಟ ನೌಕರರನ್ನು ಗೌರವಿಸುತ್ತದೆ ಅಂದ್ಕೊಂಡರೆ ಶಾಲೆಯ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಈ ತಾಯಂದಿರ ಸ್ವಂತ ಮಕ್ಕಳಿಗೆ ತಣ್ಣನೆ ಊಟ ನೀಡುವಷ್ಟೂ ಸಂಬಳ ನೀಡದಿರುವುದು ಖಂಡನೀಯ ಎಂದರು. ಇಂದಿನ ಬೆಲೆ ಏರಿಕೆಯ ನಡುವೆ ಮಾಸಿಕ ರೂ ೩,೫೦೦ ವೇತನ ಪಡೆದು ಬದುಕಲು ಸಾದ್ಯವೇ ಎಂದ ಅವರು ಸರಕಾರ ಮಹಿಳೆಯರ ಋಣ ತೀರಿಸುವ ಕೆಲವು ಯೋಜನೆಗಳು ಜಾರಿಗೊಳಿಸಿದ್ದು ಸ್ವಾಗತಾರ್ಹವಾದರೂ ದುಡಿಯುವ ಮಹಿಳೆಯರನ್ನು ಕಡೆಗಣಿಸುವುದು ಸಹಿಸಲು ಸಾದ್ಯವಿಲ್ಲ ಎಂದರು. ಕಾಂಗ್ರೇಸ್ ಚುನಾವಣಾ ಗ್ಯಾರೆಂಟಿ ನೀಡಿದ ವೇತನವನ್ನೂ ಜಾರಿ ಮಾಡದಿರುವುದು ಮಾತಿಗೆ ತಪ್ಪಿದ ಸರಕಾರ ಎಂಬಂತಾಗಿದೆ ಎಂದ ಅವರು ಬಿಸಿಯೂಟ ನೌಕರರಿಗೆ ಕನಿಷ್ಟ ಮಾಸಿಕ ರೂ. 12 ಸಾವಿರ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಪಿಕೆ ಸತೀಶನ್ ಮಾತನಾಡಿ, ದುಡಿಯುವ ಜನರ ಬದುಕಿನ ಕಾಳಜಿ ವಹಿಸದ ಯಾವುದೇ ಸರಕಾರ ದೇಶವನ್ನು ಉದ್ದಾರ ಮಾಡಲು ಸಾದ್ಯವಿಲ್ಲ, ಇಂತಹ ಸರಕಾರಗಳ ವಿರುದ್ದ ಕಾರ್ಮಿಕ ವರ್ಗ ರಾಜಿ ಇಲ್ಲದ ಹೋರಾಟ ನಡೆಸಬೇಕು ಎಂದರು.
ಕಡಬ ತಾಲೂಕು ಸಮಿತಿ ಕಾರ್ಯದರ್ಶಿ ಸುಲೋಚನ ಸ್ವಾಗತಿಸಿ, ಪುತ್ತೂರು ತಾಲೂಕು ಕಾರ್ಯದರ್ಶಿ ರಂಜಿತ ವಂದಿಸಿದರು. ಸಮಿತಿಗಳ ಅದ್ಯಕ್ಷರಾದ ಸುಧಾ, ರೇವತಿ, ಮುಂಖಡರುಗಳಾದ ವೇದಾ, ಜಯಂತಿ, ಸವಿತ ಹಾಗೂ ಸಿಐಟಿಯು ಮುಖಂಡರುಗಳಾದ ನೆಬಿಸಾ, ಅಶ್ವಿತ, ರಾಮಚಂದ್ರ ಮೊದಲಾದವರು ಪಾಲ್ಗೊಂಡಿದ್ದರು.