ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆ | ಎರಡು ಬಣಗಳೊಳಗೆ ಮಾರಾಮಾರಿ

ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಕುರಿತು ಕಡಬ ಅಂಬೇಡ್ಕರ‍ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೃಷ್ಣಪ್ಪ ಜಿ. ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿ ನಡೆದ ಘಟನೆ ನಡೆದಿದೆ.

ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರು. ಈ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪ ಹೊತ್ತಿರುವ ಉಚ್ಚಾಟಿತ ಮುಖಂಡರು ಆಗಮಿಸಿದ್ದು ಕೃಷ್ಣಪ್ಪ ಜಿ. ಬಣದವರ ಆಕ್ರೋಶಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಸಭೆ ಮಾತಿನ ಚಕಮಕಿ ಮೂಲಕವೇ ಪ್ರಾರಂಭವಾಗಿದ್ದು ಸ್ವತಃ ಕೃಷ್ಣಪ್ಪ ಅವರೇ ಉಚ್ಚಾಟಿತ ಸದಸ್ಯರಿಗೆ ನೀವು ಈ ಸಭೆಗೆ ಯಾಕೆ ಬಂದಿದ್ದಿರಿ?, ನಿಮಗೆ ಮಾನ ಮರ್ಯಾದಿ ಇಲ್ಲವೇ ಎಂದು ರೇಗಿಸಿದ್ದಾರೆ. ಬಳಿಕ ಮುಖಂಡರೋರ್ವರು ಸಭೆಯಲ್ಲಿ ಪ್ರಶ್ನಿಸಿ, ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ಚಾಟಿತರು ಇರಲು ಅವಕಾಶ ಇದೆಯೇ? ಎಂದು ಪ್ರಶ್ನಿಸಿದ್ದು, ಅಲ್ಲಿಂದ ಪ್ರಾರಂಭವಾದ ಮಾತಿನ ಚಕಮಕಿ ನೂಕಾಟ, ತಳ್ಳಾಟ, ಹಲ್ಲೆ ನಡೆಯುವ ತನಕ ತಲುಪಿತು.

ಪೋಲಿಸರ ಮಧ್ಯಪ್ರವೇಶದ ಬಳಿಕ ಘಟನೆ ತಣ್ಣಗಾಯಿತು ಕೃಷ್ಣಪ್ಪ ಬಣದ ಮೂರು ನಾಲ್ಕು ಮಂದಿ ಮುಖಂಡರು ನಂದ ಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆಸಿದ ಆರೋಪವೂ ವ್ಯಕ್ತವಾಗಿದ್ದು ಮಾರಾಮಾರಿ ನಡೆದಿರುವ ವೀಡಿಯೋಗಳು ಲಭ್ಯವಾಗಿದೆ. ನಂದಕುಮಾರ್ ಬಣದ ಸಾಮಾಜಿಕ ತಾಣ ನಿರ್ವಹಣೆ ಮಾಡಿದ ಮುಖಂಡರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂಬೇಡ್ಕರ್ ಭವನದ ಚಯರ್ ಗಳನ್ನು ಎಳೆದಾಡಿದ್ದು, ಪೋಲಿಸರು ಆಗಮಿಸಿ ಇತ್ತಂಡಗಳಿಗೆ ಪ್ರತ್ಯೇಕ ಸಭೆ ನಡೆಸುವಂತೆ ಸೂಚಿಸಿದ್ದು, ಕೊನೆಯಲ್ಲಿಯೂ ಮಾತಿನ ಚಕಮಕಿ ನಡೆದಿದೆ.ಒಟ್ಟಿನಲ್ಲಿ ಸೋಲಿನ ಪರಾಮರ್ಶೆ ಸಭೆಯು ರಣಾಂಗಣವಾದ ಸನ್ನಿವೇಶ ನಡೆದಿರುವುದು. ಮುಂದೆ ಉಭಯ ಬಣಗಳ ವೈಮನಸ್ಯ ಯಾವ ರೀತಿಯಲ್ಲಿ ಕೊನೆಯಾಗಬಹುದು ಎಂಬ ಕುತೂಹಲ ಪ್ರಾರಂಭವಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top