ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಹಾಗೂ ಗ್ರಾಮ ವಿಕಾಸ ಯೋಜನೆಯಡಿ “ವಿವೇಕ ಸಂಜೀವಿನಿ” ‘ಗಿಡ ನೆಡುವ ಹಾಗೂ ನಾಟಿ ವೈದ್ಯರಿಗೆ ಗೌರವಾರ್ಪಣೆ’ ಕಾರ್ಯಕ್ರಮ ಕುಂಜೂರು ಹಿ. ಪ್ರಾ. ಶಾಲೆಯಲ್ಲಿ ನಡೆಯಿತು.
ನಾಟಿ ವೈದ್ಯ ಮಹಾಲಿಂಗ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ನಾಟಿ ವೈದ್ಯ ಪದ್ಧತಿಯ ಅನುಕೂಲತೆಯ ಬಗ್ಗೆ ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಜೂರು ಶಾಲಾ ಮುಖ್ಯ ಶಿಕ್ಷಕಿ ಇಂದಿರಾ. ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ಗಿಡಮರಗಳು ಭೂಮಿಯ ಸಂರಕ್ಷಣೆಯನ್ನು ಮಾಡುತ್ತವೆ ಈ ಕಾರಣದಿಂದ ಮನೆಗೊಂದು ಗಿಡ ಊರಿಗೊಂದು ವನ ಎಂಬ ಆಶಯದಂತೆ ನಾವಿಂದು ಈ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸೋಣ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪ್ರಗತಿಪರ ಕೃಷಿಕ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ಸಮಾಜದ ಒಳಿತಿಗೆ ಎಲ್ಲರೂ ಪರಿಶ್ರಮ ಪಡಬೇಕೆಂದು ಹೇಳಿದರು.
ಧರ್ಮಸ್ಥಳ ಸ್ವಸಹಾಯ ಸಂಘ ಬಲ್ನಾಡು ವಲಯದ ಮೇಲ್ವಿಚಾರಕ ಪ್ರಶಾಂತ್ ಕುಮಾರ್ ಜೆ. ಮಾತನಾಡಿ, ಮನುಷ್ಯ ಅರೋಗ್ಯವಂತ ಜೀವನ ನಡೆಸಬೇಕಾದರೆ ನಮ್ಮ ಪರಿಸರ ಶುಭ್ರವಾಗಿರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಾಟಿ ವೈದ್ಯ ಮಹಾಲಿಂಗ ನಾಯ್ಕರಿಗೆ ಗೌರವಾರ್ಪಣೆ ನಡೆಯಿತು. ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅನುರಾಧ ಸ್ವಾಗತಿಸಿ, ಮುರಳೀಕೃಷ್ಣ. ಕೆ. ವಂದಿಸಿದರು. ಪ್ರಶಿಕ್ಷಣಾರ್ಥಿ ಕೀರ್ತನ್. ಕೆ. ಕಾರ್ಯಕ್ರಮ ನಿರೂಪಿಸಿದರು.