ಪುತ್ತೂರು: ಹಿಂಸಾತ್ಮಕರ ರೀತಿಯಲ್ಲಿ ದಕನಕರುಗಳನ್ನು ಪತ್ತೆಹಚ್ಚಿದ ಧರ್ಮಸ್ಥಳ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಕ್ರಿಯ ಬಿಜೆಪಿ ಕಾರ್ಯಕರ್ತರೆನ್ನಲಾದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಪ್ರಮೋದ್ ಸಾಲ್ಯಾನ್, ಒಳಗದ್ದೆ ನಿವಾಸಿ ಪುಷ್ಪರಾಜ್ ಹಾಗೂ ಹಾಸನ ಜಿಲ್ಲೆಯ ಕಸಬಾ ಹೋಬಳಿ ಅರಕಲಗೂಡು ನಿವಾಸಿ ಚೆನ್ನಕೇಶವ ಮತ್ತು ಹೊಳೆನರಸೀಪುರ ನಿವಾಸಿ ಸಂದೀಪ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಸಾಗಾಟಕ್ಕೆ ಬಳಸಿದ ಮೂರು ವಾಹನಗಳು, 6 ದನ ಹಾಗೂ 2 ಗಂಡು ಕರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಧರ್ಮಸ್ಥಳ ಠಾಣೆಯ ಎಸ್.ಐ. ಅನಿಲ್ ಕುಮಾರ್ ತಂಡ ಜು.12 ರಂದು ರಾತ್ರಿ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭ ಉಜಿರೆ ಕಡೆಯಿಂದ ಧರ್ಮಸ್ಥಳದತ್ತ ಬರುತ್ತಿದ್ದ ಎರಡು ಪಿಕಪ್ ಸೇರಿದಂತೆ ಮೂರು ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ದನಗಳು ಪತ್ತೆಯಾದವು. ತಕ್ಷಣ ಪೊಲೀಸರು ಅವರನ್ನು ವಿಚಾರಸಿದಾಗ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.