ಬೆಂಗಳೂರು: ಏರೋನಿಕ್ಸ್ ಇಂಟರ್ನೆಟ್ ಎಂಬ ಕಂಪನಿಯ ಸಿಇಒ ಹಾಗೂ ಎಂಡಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರು ನಗರದ ಅಮೃತಹಳ್ಳಿಯಲ್ಲಿ ಹಾಡುಹಗಲೇ ನಡೆದಿದೆ.
ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಸಿಇಒ ವಿನುಕುಮಾರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಹತ್ಯೆಯಾದರು.
ಸಂಜೆ 4 ಗಂಟೆಯ ಸುಮಾರಿಗೆ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೃತ್ಯ ಎಸಗಿದ್ದು, ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಏರೋನಿಕ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಫೆಲಿಕ್ಸ್ ಕಂಪನಿಯಿಂದ ಹೊರಬಂದು ಸ್ವಂತ ಕಂಪನಿ ಸ್ಥಾಪಿಸಿದ್ದ. ಈ ಉದ್ಯಮಕ್ಕೆ ಪಣೀಂದ್ರ ಎದುರಾಳಿಯಾಗಿದ್ದನಂತೆ. ಇದೇ ಕಾರಣಕ್ಕೆ ಫೆಲಿಕ್ಸ್ ಎದುರಾಳಿ ಫಣೀಂದ್ರರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು, ಸಂಜೆ ಪಂಪಾ ಬಡವಾಣೆಯಲ್ಲಿರುವ ಏರೋನಿಕ್ಸ್ ಕಂಪನಿಗೆ ತೆರಳಿ ಪಣೀಂದ್ರ ಹಾಗೂ ವಿನುಕುಮಾರ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಫೆಲಿಕ್ಸ್ ಸೇರಿದಂತೆ ಮೂವರು ಆರೋಪಿಗಳು ಕಂಪನಿಗೆ ನುಗ್ಗಿ ಮೊದಲ ಮಹಡಿಯಲ್ಲಿ ಒಬ್ಬರನ್ನ ಕೊಲೆ ಮಾಡಿ, ಎರಡನೇ ಮಹಡಿಯಲ್ಲಿ ಮತ್ತೊಬ್ಬರನ್ನು ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಎಂಡಿ ಮತ್ತು ಸಿಇಒ ಅವರನ್ನು ಕೊಲೆ ಮಾಡುವ ಮುನ್ನ ಚೇಂಬರಿಗೆ ಆಗಮಿಸಿದ ಮೂವರು ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧಗಂಟೆಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ಕಂಪನಿಯಲ್ಲಿ 10-12 ಜನರು ಕೆಲಸ ಮಾಡುತ್ತಿದ್ದರು. ಮಾತುಕತೆ ಬಳಿಕ ಆರೋಪಿಗಳು ಏಕಾಏಕಿಯಾಗಿ ದಾಳಿ ನಡೆಸಿದ್ದು ಎಂಡಿ ಮತ್ತು ಸಿಇಒ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕೆಲಸ ಮಾಡುತ್ತಿದ್ದವರು ರಕ್ಷಣೆ ಮಾಡಲು ಧಾವಿಸಿದ್ದಾರೆ. ಈ ವೇಳೆ ಇವರಿಗೆ ತಲ್ವಾರ್ ತೋರಿಸಿ ಬೆದರಿಕೆ ಹಾಕಿ ನಂತರ ಇಬ್ಬರನ್ನು ಕೊಲೆ ಮಾಡಿದ್ದಾರೆ. ತಲ್ವಾರ್ ಮತ್ತು ಚಾಕುವಿನ ಇರಿತದಿಂದ ಗಂಭೀರವಾಗಿ ಗಾಯಗೊಂಡ ಫಣೀಂದ್ರ ಮತ್ತು ವಿನುಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಮೃತಹಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಫಣಿಂದ್ರ, ವಿನುಕುಮಾರ್ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.