ಪುತ್ತೂರು: ಚದುರಂಗ ಆಟವು ಒಂದು ಚತುರತೆಯ ಆಟ. ಇದು ಬುದ್ದಿಗೆ ಕೆಲಸ ನೀಡುವ ಆಟವಾಗಿದ್ದು ನಿರಂತರವಾಗಿ ಅಭ್ಯಾಸಿಸಿದರೆ ಮಾತ್ರ ಉತ್ತಮ ಪರಿಣಾಮ ಕಾಣಬಹುದು. ಹಾಗಾಗಿ ವಿದ್ಯಾರ್ಥಿಗಳು ಚುರುಕುತನ ಪಡೆಯಲು ಚೆಸ್ ಉತ್ತಮ ಕ್ರೀಡೆ ಎಂದು ದ.ಕ-ಜಿಲ್ಲೆ ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜು ಹಾಗೂ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಅಂತರ್ ಕಾಲೇಜು ಹಾಗೂ ಅಂತರ್ ಜಿಲ್ಲಾ ಮಟ್ಟದ 42ನೇ ಮಾನ್ಸೂನ್ ಚೆಸ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಕೆ.ಎನ್. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದ ಕಾಲೇಜು ಸಾಂಸ್ಕೃತಿಕ, ಕ್ರೀಡಾ, ಕಲಿಕಾ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುವ ಶಿಕ್ಷಣ ಸಂಸ್ಥೆಯಾಗಿದೆ. ಚದುರಂಗ ಆಟದಿಂದ ಆಟಗಾರರ ಜೀವನ ಶೈಲಿಯಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು ಅಲ್ಲದೇ ಚೆಸ್ ನಿಂದಾಗಿ ಅಧ್ಯಯನ ಪ್ರವೃತಿ, ಸಂಶೋಧನಾ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ಸಮಾರೋಪ ಸಮಾರಂಭ :
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ವಿಶ್ವೇಶ್ವರ ಭಟ್ ಮಾತನಾಡಿ, ಚದುರಂಗದ ಆಟವನ್ನು ಬಾಲ್ಯದಿಂದಲೇ ಅಭ್ಯಾಸ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯ. ಹಾಗೆ ಪ್ರಸ್ತುತ ಕಾಲಘಟ್ಟದಲ್ಲಿ ಇದು ಕೇವಲ ಆಟವಾಗದೆ ಜೀವನ ಸಾಗಿಸಲು ಆರ್ಥಿಕ ನೆರವನ್ನು ನೀಡುತ್ತದೆ ಎಂದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್, ಮುಖ್ಯ ತೀರ್ಪುಗಾರ ರಾಷ್ಟ್ರೀಯ ಕ್ರೀಡಾಪಟು ಪ್ರಶಾಂತ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ವಂದಿಸಿದರು. ಡಾ. ಜ್ಯೋತಿ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. 2 ದಿನಗಳ ಕಾಲ ನಡೆದ ಚದುರಂಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಜೊನ್ಸ್ ಲಾರೆನ್ಸ್ ಪಿಂಟೋ ಸೆಂಟ್ ಅಲೋಶಿಯಸ್ ಕಾಲೇಜು ಮಂಗಳೂರು, ದ್ವಿತೀಯ ಬಹುಮಾನವನ್ನು ಕಿರಣ್ ಹೆಗ್ಡೆ ಡಾ. ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ ಹಾಗೂ ತೃತೀಯ ಬಹುಮಾನವನ್ನು ದಿವ್ಯಾ.ಡಾ. ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ ಪಡೆದುಕೊಂಡರು