ಬೆಂಗಳೂರು : ಶಾಲಾ ಶಿಕ್ಷಕರಿಗೆ ವಸ್ತ್ರಸಂಹಿತೆ ಜಾರಿಗೊಳಿಸುವ ಕುರಿತು ಚರ್ಚೆ ನಡೆಸಿ ಆ ಬಳಿಕ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸೋಮವಾರ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಅವರು, ಶಾಲಾ ಶಿಕ್ಷಕರ ವಸ್ತ್ರಸಂಹಿತೆಗೆ ನಿಯಮಗಳಿಲ್ಲ. ಅಂತಹ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ. ವಸ್ತ್ರಸಂಹಿತೆ ಒಳಿತು ಎನ್ನುವುದಾದರೆ ಎಲ್ಲರ ಜತೆ ಚರ್ಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.
ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ಬದ್ಧವಾಗಿದೆ. ಕೋರ್ಟ್ ತಡೆ ಇರುವ ಕಾರಣ 13,500 ಸಾವಿರ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲು ಸಾಧ್ಯವಾಗಿಲ್ಲ. ಕಾನೂನು ತಜ್ಞರ ಜತೆ ಚರ್ಚಿಸಲಾಗಿದೆ. ಶೀಘ್ರ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. 900ಕ್ಕೂ ಹೆಚ್ಚು ವಿಶೇಷ ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ 306 ಸರ್ಕಾರಿ ಪ್ರೌಢಶಾಲೆಗಳನ್ನು ಮೇಲ್ದರ್ಜೆಗೇರಿಸಿ, ಪದವಿಪೂರ್ವ ಶಿಕ್ಷಣಕ್ಕೆ ಅವಕಾಶ ನೀಡಲಾಗುವುದು. ಈಗಾಗಲೇ 113 ಪ್ರಾಥಮಿಕ ಶಾಲೆಗಳಲ್ಲಿ ಪ್ರೌಢಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.