ಮುಂಡಾಜೆ : ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22ನೇ ಶಾಖೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೋಮಂತಡ್ಕ ಡಿಸೋಜಾ ಕಾಂಪ್ಲೆಕ್ಸ್ ಒಂದನೇ ಮಹಡಿಯಲ್ಲಿ ಭಾನುವಾರ ಶುಭಾರಂಭಗೊಂಡಿತು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಉದ್ಯಮ ಯಶಸ್ವಿಯಾಗಬೇಕಾದರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಒಂದೇ ಗಾಡಿಯ ನಾಲ್ಕು ಚಕ್ರದಂತೆ ಸಾಗಬೇಕು. ಹಾಗಾದರೆ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ವೆಂಕಟರಮಣ ಸೊಸೈಟಿ ಅನೇಕ ಸಾಮಾಜಿಕ ಅಭಿವೃದ್ಧಿ ಧ್ಯೇಯವನ್ನಿಟ್ಟುಕೊಂಡು ಗ್ರಾಹಕರ ವಿಶ್ವಾಸ ಪಡೆದು ಬೆಳೆದು ಬಂದಿದೆ ಎಂದ ಅವರು, ಸೊಸೈಟಿಯಲ್ಲಿ ಕ್ಲಪ್ತ ಸಮಯದಲ್ಲಿ ಜನರಿಗೆ ಸಾಲಸೌಲಭ್ಯ ದೊರೆಯುತ್ತದೆ. ಶೇ.90 ರಷ್ಟು ಜನ ಸೊಸೈಟಿಗಳಿಗೆ ರೀಚ್ ಆಗಿದ್ದಾರೆ. ಮುಂದಿನ ತಿಂಗಳಲ್ಲಿ ಮತ್ತೊಂದು ಬ್ರಾಂಚ್ ಉದ್ಘಾಟನೆಗೊಳ್ಳಲಿದೆ 25ನೇ ವರ್ಷಕ್ಕೆ 25 ಬ್ಯಾಂಚ್ ತೆರೆಯುವ ಇರಾದೆ ಇದೆ. ಅವಕಾಶ ವಂಚಿತರಿಗೆ ಸಾಲ ಸೌಲಭ್ಯಗಳು ಈ ಸೊಸೈಟಿಯಿಂದ ಸಿಗುವಂತಾಗಲಿ ಎಂದರು.
ಶ್ರೀ ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಆರಂಭವಾದ ಸಂಘ 22ನೇ ಶಾಖೆಯನ್ನು ತೆರೆದಿದ್ದು, ರಜತ ಸಂಭ್ರಮದ ಅಂತ್ಯದೊಳಗೆ 25 ಕ್ಕೆ ಏರಿಸುವ ಗುರಿಯನ್ನು ಹೊಂದಲಾಗಿದೆ. ಒಟ್ಟು ಶಾಖೆಗಳಲ್ಲಿ 17,034 ಸದಸ್ಯರಿದ್ದಾರೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಸೊಸೈಟಿ ಉದ್ಘಾಟನೆ ಮೂಲಕ ಇಲ್ಲಿನ ಆರ್ಥಿಕ ವ್ಯವಹಾರ ಸದೃಢವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಹಕಾರ ಕ್ಷೇತ್ರ ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಜತೆಗೆ ವಿಶ್ವಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ ಎಂದರು.
ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಪೋಷಕಿ ಲೋಕೇಶ್ವರಿ ವಿನಯಚಂದ್ರ, ಮರೈನ್ ನಿವೃತ್ತ ಮುಖ್ಯ ಇಂಜಿನಿಯರ್ ಡಿ.ಎಂ.ಗೌಡ, ಮುಂಡಾಜೆ ಗ್ರಾಪಂ ಅಧ್ಯಕ್ಷೆ ರಂಜಿನಿ ಆರ್., ಬೆಳ್ತಂಗಡಿ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪಿ.ತಿಮ್ಮಪ್ಪ ಗೌಡ ಬೆಳಾಲು, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ಚಂದ್ರಕಾಂತ್, ಕಾಂಪ್ಲೆಕ್ಸ್ ಮಾಲಕ ಹೆನ್ರಿ ಡಿಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೊಸೈಟಿ ಆಡಳಿತ ಮಂಡಳಿ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ನಿರ್ದೇಶಕರಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಚಂದ್ರಾ ಕೋಲ್ಚಾರ್, ಕೆ.ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್., ಜಯಲಲಿತಾ ಕೆ.ಎಸ್., ನಳಿನಿ ಸೂರಯ್ಯ, ಲತಾ ಎಸ್. ಮಾವಜಿ, ಹೇಮಚಂದ್ರ ಐ.ಕೆ., ನವೀನ್ ಕುಮಾರ್ ಜೆ.ವಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ಮ ಬ್ರಾಂಚ್ ಮೆನೇಜರ್ ಯೋಗೀಶ್, ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗ್ರಾಹಕರಿಗೆ ಪ್ರಥಮ ಪಾಲುಪತ್ರ, ಠೇವಣಿ ಪತ್ರ, ಉಳಿತಾಯ ಖಾತೆ ಪುಸ್ತಕ ವಿತರಿಸಲಾಯಿತು.