ಪುತ್ತೂರು: ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟ, ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವವರ ಸಂಘದ ವತಿಯಿಂದ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದಾಗಿ ಟೂರಿಸ್ಟ್ ವಾಹನ ಚಾಲಕ-ಮಾಲಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಪ್ರತಿಭಟನೆ ಸೋಮವಾರ ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರದ ಬಳಿ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಕರ್ನಾಟಕ ಕಾರ್ಮಿಕ ಒಕ್ಕೂಟಗಳ ಅಧ್ಯಕ್ಷ ಬಿ.ಪುರಂದರ ಭಟ್ ಮಾತನಾಡಿ, ಸರಕಾರದ ಉಚಿತ ಯೋಜನೆಯಿಂದ ಕಾರ್ಮಿಕರು, ಖಾಸಗಿ ವಾಹನ ಚಾಲಕ-ಮಾಲಕರು ಬೀದಿಗೆ ಬಂದು ಪ್ರತಿಭಟನೆ ನಡೆಸುವ ಪರಿಸ್ಥಿತಿ ಬಂದಿದೆ. ಉಚಿತ ಎಂಬ ಪದವನ್ನು ಯಾವ ಧರ್ಮವೂ ಹೇಳಿಲ್ಲ. ನಿಜವಾಗಿ ತನ್ನ ಸಂಪಾದನೆಯ ಒಂದಂಶ ಸಮಾಜಕ್ಕೆ ಮೀಸಲು ಎಂದು ಹೇಳಿದೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮಹತ್ವವಾಗಿದ್ದು, ಈ ಸಂದರ್ಭದಲ್ಲಿ ಜನ ಎಚ್ಚೆತ್ತುಕೊಳ್ಳಬೇಕಿತ್ತು. ಈಗ ಪರಿಸ್ಥಿತಿ ಕೈಮೀರಿದೆ. ಒಂದೆಡೆ ಜನರಿಂದಲೇ ಲೂಟಿ ಮಾಡಿ ಇನ್ನೊಂದೆಡೆ ಉಚಿತ ನೀಡುವ ಕೆಲಸ ನಡೆಯುತ್ತಿರುವುದು ಪ್ರಜಾಪ್ರಭುತ್ವದಲ್ಲಿ ಎಷ್ಟು ಸರಿ ಎಂದು ಪ್ರಶ್ನಿಸಿದರು.
ನವಕರ್ನಾಟಕ ಕಟ್ಟಡ ಕಾರ್ಮಿಕ ಸಂಘ, ವಿದ್ಯುತ್ ಕಂಬ ಅಳವಡಿಸುವವರು ಸಂಘದ ಜಿಲ್ಲಾಧ್ಯಕ್ಷ ಜಯರಾಮ್ ಕುಲಾಲ್ ಮಾತನಾಡಿ, ಸರಕಾರದ ಉಚಿತ ಯೋಜನೆಯಿಂದಾಗಿ ಕಾರ್ಮಿಕ ವರ್ಗ ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಿದೆ. ಸರಕಾರ ಉಚಿತ ನೀಡುವ ಬದಲು ಉಚಿತ ಉದ್ಯೋಗ ಮಾಹಿತಿ ಕೇಂದ್ರ ಸ್ಥಾಪಿಸಲಿ, ಕಟ್ಟಡ ಮುಂತಾದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸರಿಯಾಗಿ ನೀಡಲಿ ಹೊರತು ತಾರತಮ್ಯದ ಉಚಿತ, ಸಮಾಜಕ್ಕೆ ಕೆಟ್ಟ ಪರಿಣಾಮ ಬೀರುವ ಉಚಿತ ಯೋಜನೆ ನಮಗೆ ಬೇಡ. ಈ ಉಚಿತ ಯೋಜನೆಯಿಂದಾಗಿ ಮುಂದೊಂದು ದಿನ ರೈತರು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ರಿಕ್ಷಾ ಚಾಲಕ-ಮಾಲಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಲಿದೆ ಎಂದ ಅವರು, ಸರಕಾರಕ್ಕೆ ಕಾರ್ಮಿಕ ವರ್ಗದವರ ಮೇಲೆ ಕರುಣೆಯಿದ್ದರೆ ವಾಹನ ಚಾಲಕ-ಮಾಲಕರಿಗೆ ಉಚಿತ ಪಘಾತ ವಿಮಾ ಸೌಲಭ್ಯ, ಸಾಲಸೌಲಭ್ಯ,ಮುಂತಾದ ಯೋಜನೆಯನ್ನು ಜ್ಯಾರಿಗೆ ತರಲಿ ಎಂದು ಒತ್ತಾಯಿಸಿದರು.
ಸಂಘದ ಕಾನೂನು ಸಲಹೆಗಾರ ದೇವಾನಂದ ಕೆ. ಮಾತನಾಡಿ, ಈ ಉಚಿತ ಯೋಜನೆಯನ್ನು ಕೈಬಿಟ್ಟು ಸರಕಾರ ರಿಕ್ಷಾ-ಚಾಲಕ ಮಾಲಕರಿಗೆ ಸಬ್ಸಿಡಿ ದರದಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್ ನೀಡಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ಶೇಷಪ್ಪ ಕುಲಾಲ್, ಮೋಹನ ಆಚಾರ್ಯ, ಅರುಣ್ ಕುಮಾರ್, ಶಿವಪ್ರಸಾದ್ ಕೌಡಿಚ್ಚಾರ್, ರಾಜೇಶ್ ಮುಕ್ವೆ, ಸುಂದರ್, ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಭಟನೆ ಬಳಿಕ ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ಸಹಾಯಕ ಕಮೀಷನರ್ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.