ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ “ಬಿಲ್ಲವ ವಧು-ವರಾನ್ವೇಷಣೆ-2023” ಭಾನುವಾರ ಬೆಳಗ್ಗೆ ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.
ವಧು-ವರಾನ್ವೇಷಣೆಯಲ್ಲಿ ತೊಡಗಿಕೊಂಡ ಸುಮಾರು 180 ಕ್ಕೂ ಅಧಿಕ ಮಂದಿ ನೋಂದಾವಣೆ ಮಾಡಿಕೊಂಡಿದ್ದು, ಕಾರ್ಯಕ್ರಮದಲ್ಲಿ ನೋಂದಾವಣೆಯಾದವರ ಸಂಪೂರ್ಣ ಮಾಹಿತಿಯನ್ನು ಎಲ್‍ಇಡಿ ಸ್ಕ್ರೀನ್ ನಲ್ಲಿ ಡಿಸ್ ಪ್ಲೇ ಮಾಡಲಾಯಿತು. ಈ ಸಂದರ್ಭದಲ್ಲಿ ವಧು ಅನ್ವೇಷಣೆ ಹಾಗೂ ವರ ಅನ್ವೇಣೆಯಲ್ಲಿ ತೊಡಗಿಕೊಂಡವರಿಗೆ ನಂಬರ್ ನೀಡಲಾಗಿದ್ದು, ನಂಬರ್ ಪಡೆದುಕೊಂಡವರಿಗೆ, ತಮ್ಮ ವಧು ಅಥವಾ ವರ ಆಯ್ಕೆಯಾದವರಿಗೆ ಸಂಪೂರ್ಣ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ಹಾಕಲಾದ ಕೌಂಟರ್ ನಲ್ಲಿ ನೀಡಲಾಯಿತು. ಈ ಮೂಲಕ ಯುವವಾಹಿನಿ ಘಟಕ ಉತ್ತಮ ಕಾರ್ಯವೊಂದನ್ನು ಏರ್ಪಡಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಯುವವಾಹಿನಿ ಘಟಕ ರಾಜ್ಯಮಟ್ಟದಲ್ಲಿ ವಧು-ವರಾನ್ವೇಷಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸೂಕ್ತ ವೇದಿಕೆ ಒದಗಿಸಿದೆ. ವರ-ವಧು ಅನ್ವೇಷಣೆಯಲ್ಲಿ ತೊಡಗಿಕೊಂಡವರಿಗೆ ಕಾರ್ಯಕ್ರಮದಿಂದ ಪ್ರಯೋಜನವಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಪೂಜಾರಿ ನೆಕ್ಕರೆ ಮಾತನಾಡಿ, ಮದುವೆ ಎಂಬುದು ಋಣಾನುಬಂಧವಾಗಿದ್ದು, ಮದುವೆ ಕಾರ್ಯದಲ್ಲಿ ಆಗಬೇಕಾದ ಶಾಸ್ತ್ರಗಳಿಗೆ ಮಹತ್ವ ನೀಡಬೇಕಾದ ಅಗತ್ಯವಿದೆ ಎಂದರು.
ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ಬಾಯಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಸಮುದಾಯದಲ್ಲಿ ಮದುವೆ ಆಗದವರಿಗೆ ಕಂಕಣಭಾಗ್ಯ ಆದಷ್ಟು ಬೇಗ ಕೂಡಿಬರಲಿ. ವಾಟ್ಸಪ್ ಮೂಲಕ ಸಾಕಷ್ಟು ಮಂದಿ ತಮ್ಮ ಮಾಹಿತಿ ನೀಡಿ ಸಹಕರಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಸನಿಲ್, ವಧು-ವರಾನ್ವೇಷಣೆ ಸಂಚಾಲಕ ಜಯರಾಮ ಬಿ.ಎನ್. ಉಪಸ್ಥಿತರಿದ್ದರು. ಪೂರ್ಣಿಮಾ, ಪ್ರಿಯ ಪ್ರಾರ್ಥನೆ ಹಾಡಿದರು. ಯುವವಾಹಿನಿ ಘಟಕದ ಸಮಾಜ ಸೇವಾ ನಿರ್ದೇಶಕ ಮೋಹನ ಶಿಬರ ಸ್ವಾಗತಿಸಿದರು. ಯುವವಾಹಿನಿ ಘಟಕದ ಕಾರ್ಯದರ್ಶಿ ಅಣ್ಣಿ ಪೂಜಾರಿ ವಂದಿಸಿದರು. ಶಶಿಧರ ಕಿನ್ನಿಮಜಲು, ಸುಪ್ರಿತಾ ಚರಣ್ ಕಾರ್ಯಕ್ರಮ ನಿರೂಪಿಸಿದರು.