ಬೆಂಗಳೂರು:: ರಾಜ್ಯ ಸರ್ಕಾರ ತನ್ನ ಐದು ಗ್ಯಾರಂಟಿಗಳಲ್ಲಿ ಈಗಾಗಲೇ 2 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ನಾಳೆಯಿಂದ ಮೂರನೇ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಕೂಡ ಜಾರಿಗೆ ಬರಲಿದ್ದು ನಾಳೆಯಿಂದ ನೇರವಾಗಿ ಬಿಪಿಎಲ್ ಹಾಗೂ ಅಂತ್ಯೋದಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ಸೋಮವಾರ ಸಂಜೆ ಐದು ಗಂಟೆಗೆ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.
ರಾಜ್ಯ ಸರ್ಕಾರವು ಐದು ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ್ದು ಉಳಿದ ಐದು ಕೆಜಿ ಅಕ್ಕಿಯ ಬದಲಾಗಿ 170 ರೂಪಾಯಿಗಳನ್ನು ನೀಡಲಿದೆ. ಈ ಹಣವು ನೇರವಾಗಿ ರೇಷನ್ ಕಾರ್ಡ್ನಲ್ಲಿ ಯಜಮಾನ ಎಂದು ನಮೂದಾಗಿರುವ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹೋಗಲಿದೆ. ನಿಮ್ಮ ಮನೆಯಲ್ಲಿ ಒಬ್ಬರು ಸದಸ್ಯರಿದ್ದರೆ 170 ರೂಪಾಯಿ, ಇಬ್ಬರಿದ್ದರೆ 340 ರೂಪಾಯಿ, ಮೂವರಿದ್ದರೆ 510 ರೂಪಾಯಿ , ನಾಲ್ವರಿದ್ದರೆ 680 ರೂಪಾಯಿ ಹಾಗೂ ಐವರಿದ್ದರೆ 850 ರೂಪಾಯಿ ಹೀಗೆ ಈ ಲೆಕ್ಕಾಚಾರದಲ್ಲಿ ರಾಜ್ಯ ಸರ್ಕಾರವು ಹಣ ಜಮೆ ಮಾಡಲಿದೆ .
ನಿಮ್ಮ ಬ್ಯಾಂಕ್ ಖಾತೆಗೂ ನಾಳೆಯಿಂದ ಅನ್ನಭಾಗ್ಯದ ಹಣ ಬರಬೇಕು ಎಂದರೆ ನೀವು ಕಡ್ಡಾಯವಾಗಿ ಮೂರು ಷರತ್ತುಗಳನ್ನು ಪಾಲಿಸಿರಬೇಕು. ಮೊದಲನೇಯದಾಗಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ನಲ್ಲಿ ಮನೆಯ ಮುಖ್ಯಸ್ಥ ಎಂದು ನಮೂದಾದ ವ್ಯಕ್ತಿಯು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆತನ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಹಾಗೂ ರೇಷನ್ ಕಾರ್ಡ್ನಲ್ಲಿಯೂ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು. ಅಲ್ಲದೇ ನೀವು ಕಳೆದ ಮೂರು ತಿಂಗಳು ನ್ಯಾಯಬೆಲೆ ಅಂಗಡಿಗೆ ತೆರಳಿ ಅನ್ನಭಾಗ್ಯದ ಅಕ್ಕಿಯನ್ನು ಪಡೆದಿರಬೇಕು.