ಸುಳ್ಯ: ಪಾಲದಿಂದ ಬಿದ್ದು ನೀರು ಪಾಲಾದ ವ್ಯಕ್ತಿಯ ಶವ ಭಾನವಾರ ಪತ್ತೆಯಾಗಿದೆ.
ನಾಲ್ಕು ದಿನಗಳ ಹಿಂದೆ ಕೂಲಿಕಾರ್ಮಿಕ ನಾರಾಯಣನ್ ಎಂಬವರು ಕೂರ್ನಡ್ಕ ಎಂಬಲ್ಲಿ ಪಾಲ ದಾಟುತ್ತಿದ್ದ ಸಂದರ್ಭ ಕಾಲು ಜಾರಿ ಹರಿಯುತ್ತಿದ್ದ ನೀರಿಗೆ ಬಿದ್ದು ಕಣ್ಮರೆಯಾಗಿದ್ದರು.
ತಕ್ಷಣದಿಂದಲೇ ಸುಳ್ಯ ಅಗ್ನಿಶಾಮಕ ದಳ ಹಾಗೂ ಎಸ್ ಡಿಆರ್ ಎಫ್, ಪೊಲೀಸ್ ಇಲಾಖೆ ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿತ್ತು. ಅಲ್ಲದೆ ಕಲ್ಲುಗುಂಡಿಯ ವಿಖಾಯ ತಂಡ, ಪೈಚಾರಿನ ಮುಳುಗು ತಜ್ಞರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಇದೀಗ ಆಲೆಟ್ಟಿಯ ಕನ್ನಿಗುಂಡಿ ಬಳಿಯ ಪಯಸ್ವಿನಿ ಹೊಳೆ ಮಧ್ಯೆ ಪೊದೆಯಲ್ಲಿ ಸಿಲುಕಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಲ್ಪಾಡಿ ಪೆರಾಜೆ ಎಂಬಲ್ಲಿ ರಬ್ಬರ್ ಟ್ಯಾಪರ್ ಆಗಿ ಕೆಲಸ ಮಾಡುತ್ತಿದ್ದ ನಾರಾಯಣನ್ ಅವರು ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ನಿವಾಸಿ.