ಪುತ್ತೂರು : ಬಿದಿರು ಕೃಷಿಯು ಅಡಿಕೆಗೆ ಪರ್ಯಾಯ ಕೃಷಿಯಲ್ಲ. ಕೃಷಿ ಪದ್ದತಿಗೆ ಪೂರಕವಾಗಿ ಬಿದಿರು ಬೆಳೆಯಬಹುದು. ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆ, ತಾಪಮಾನ ಉತ್ತಮವಾಗಿದ್ದು ಇಲ್ಲಿ ಹಲವು ತಳಿಯ ಬಿದಿರು ಬೆಳೆಯಲು ಅನುಕೂಲವಿದೆ. ಇಲ್ಲಿ ನೈಸರ್ಗಿಕವಾಗಿ ಬಿದಿರನ್ನು ಬೆಳೆಯಬಹುದು. ಬಿದಿರಿನ ಬೇಸಾಯಕ್ಕೆ ತಂತ್ರಜ್ಞಾನದ ಆವಶ್ಯಕತೆಯಿಲ್ಲ ಎಂದು ಪೊನ್ನಂಪೇಟೆ ಅರಣ್ಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ರಾಮಕೃಷ್ಣ ಹೆಗಡೆ ಹೇಳಿದರು.
ಭಾರತೀಯ ಕಿಸಾನ್ ಸಂಘದ ವತಿಯಿಂದ ಶನಿವಾರ ಪಂಚವಟಿ ಸಭಾ ಭವನದಲ್ಲಿ ನಡೆದ ಬಿದಿರು ತಳಿಗಳು, ಅವುಗಳನ್ನು ಬೆಳೆಸುವ ವಿಧಾನ ಹಾಗೂ ಮಾರುಕಟ್ಟೆ ಸೌಲಭ್ಯಗಳ ಕುರಿತ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಬಿದಿರಿನಲ್ಲಿ ಹಲವು ರೀತಿಯ ಉಪಯೋಗಗಳಿವೆ, ಮನೆಯ ಅಲಂಕಾರಿಕ ಕೈತೋಟದ ಭಾಗವಾಗಿ ಬಿದಿರು ಬಳಸಬಹುದು. ಮಹಾರಾಷ್ಟ್ರದಲ್ಲಿ ಬಿದಿರನ ಒಂದು ಕಾಂಡಕ್ಕೆ 60-80 ಬೆಲೆಯಿದೆ. ಒಂದು ಎಕರೆಯಲ್ಲಿ 160 ಗಿಡ ಬೆಳೆಯಬಹುದು. ನೆಟ್ಟು ಮೂರು ವರ್ಷದ ಬಳಿಕ ಕಟಾವಿಗೆ ಬರುತ್ತದೆ. ಪ್ರಾರಂಭಿಕ ಹಂತದಲ್ಲಿ ಆದಾಯ ಕಡಿಮೆಯಿದ್ದರೂ 10ವರ್ಷದ ಬಳಿಕ ಸುಸ್ತಿರ ಆದಾಯ ಗಳಿಸಬಹುದು. ಕನಿಷ್ಟ ಪ್ರಮಾಣದಲ್ಲಿ ಬಿದಿರು ಬೆಳೆಯುತ್ತಿದ್ದು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬಿದಿರು ಬೆಳೆಯುತ್ತಿಲ್ಲ. ಪೀಠೋಪಕರಣ, ಆಲಂಕಾರಿಕ ಮೇಲ್ಚಾವಣಿಯಾಗಿ ಬಿದಿರನ್ನು ಬೆಳೆಸಬಹುದು ಎಂದು ಹೇಳಿದರು.
ಸೈಕಲ್ ಪ್ಯೂರ್ ಬ್ರ್ಯಾಂಡ್ ಆಗರ್ ಬತ್ತಿಯ ಕಿರಣ್ ಕುಮಾರ್, ಆಗರ್ ಬತ್ತಿ ಉದ್ಯಮದಲ್ಲಿ ಬಿದಿರಿನ ಉಪಯೋಗ ಪ್ರಮುಖವಾಗಿದೆ. ಆಗರ್ ಬತ್ತಿ ಉದ್ಯಮದ ಬೇಡಿಕೆಕೆ ಅನುಗುಣವಾಗಿ ಕಚ್ಚಾ ವಸ್ತುಗಳ ಕೊರತೆಯಿದೆ. ಈಗ ಬೆಳೆಯುತ್ತಿರುವ ಬಿದಿರಿನ ಪ್ರಮಾಣ ಅಗರ್ ಬತ್ತಿ ಉದ್ಯಮಕ್ಕೆ ಸಾಕಾಗುತ್ತಿಲ್ಲ ಎಂದರು.
ಭಾರತೀಯ ಕಿಸಾನ್ ಸಂಘದ ಸಂಚಾಲಕ ಎಂ.ಜಿ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಬಿದಿರಿನಲ್ಲಿ ಕಾರ್ಬನ್ ಹೀರಿಕೊಳ್ಳುವ ಶಕ್ತಿಯಿದ್ದು ಪರಿಸರಕ್ಕೆ ಆವಶ್ಯಕವಾಗಿದೆ. ಇದರಿಂದ ಚರ್ಮದ ಖಾಯಿಲೆ, ಅಸ್ತಮಾ ಕಾಯಿಲೆಗಳಿಗೆ ಬಿದಿರು ಪರಿಹಾರ. ಅಡಿಕೆ ಕೃಷಿಯಲ್ಲಿ ಇಳುವರಿಯ ಶೇ.50ರಷ್ಟು ಅದಕ್ಕೆ ಖರ್ಚು ಮಾಡಬೇಕು. ಬಿದಿರು ಕೃಷಿಗೆ ಅಷ್ಟೊಂದು ಖರ್ಚು ಮಾಡಬೇಕಾಗಿರುವುದಿಲ್ಲ. ಬಿದಿರನ್ನು ಇಂಧನವಾಗಿ ಬಳಸಬಹುದಾಗಿದ್ದು 4 ಕೆ.ಜಿ ಬಿದಿರಿನಲ್ಲಿ ಒಂದು ಲೀಟರ್ ಪೆಟ್ರೋಲ್ ತಯಾರಿಸಬಹುದಾಗಿದೆ ಎಂದು ಹೇಳಿದ ಅವರು ಹೊಸಕೋಟೆಯಲ್ಲಿ ಶೆಲ್ ಕಂಪನಿಯವರು ಬಿದಿರಿನ ಪೆಟ್ರೋಲ್ ಪಂಪನ್ನು ಪ್ರಾರಂಭಿಸಿದ್ದರು. ಸಾಕಷ್ಟು ಬಿದಿರಿನ ಕೊರತೆಯಿಂದ ಅದು ದೊಡ್ಡ ಪ್ರಮಾಣದಲ್ಲಿ ಬೆಳೆದಿಲ್ಲ ಎಂದರು.
ಪಾರ್ಥ ತ್ರಿಪುರ ಬಿದಿರು ಬೆಳೆಯುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ಕಿಸಾನದ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರಾಂತೀಯ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಾಯ, ಜಿಲ್ಲಾ ಮಹಿಳಾ ಸಂಚಾಲಕಿ ಶಾಂಭವಿ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಚಾಲಕ ಮೂಲಚಂದ್ರ ಸ್ವಾಗತಿಸಿ, ವಂದಿಸಿದರು.