ಕಾರ್ಕಳ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಪುಸ್ತಕದಲ್ಲಿ ಹೊಸ ಸಂಪ್ರದಾಯವನ್ನು ತುರುಕಿದ್ದಾರೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಹಿಂದಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಿಂದನೆಗೆ ನೀಡಿದಷ್ಟು ಸ್ಥಳಾವಕಾಶವನ್ನು ಹೊಸ ಯೋಜನೆಗಳ ಪ್ರಕಟಣೆಗೆ ನೀಡಿಲ್ಲ. ಈ ಬಜೆಟ್ ನಲ್ಲಿ ಆರ್ಥಿಕ ಮುನ್ನೋಟಕ್ಕಿಂತ ರಾಜಕೀಯ ಹಿನ್ನೋಟವೇ ಜಾಸ್ತಿ ಇದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂ. ಖರ್ಚಾಗುತ್ತದೆ ಎಂದು ಲೆಕ್ಕಕೊಟ್ಟಿದ್ದರೂ, ಅದಕ್ಕೆ ಯಾವ ಮೂಲದಿಂದ ಹಣಕಾಸು ಹೊಂದಿಸುತ್ತಾರೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಜಿಎಸ್ಟಿ ಪರಿಹಾರ, ತೆರಿಗೆ ಹಂಚಿಕೆಯ ವಿಚಾರಗಳಲ್ಲಿ ಕೇಂದ್ರದ ಟೀಕೆ ಮತ್ತು ಅತಾರ್ಕಿಕ ವಿಚಾರಗಳಿಗೆ ಮಾತ್ರ ಮಹತ್ವ ನೀಡಿ ಸತ್ಯ ಮರೆಮಾಚಿದ್ದಾರೆ.
ತೆರಿಗೆ ಪ್ರಸ್ತಾಪವಂತೂ ಭವಿಷ್ಯದಲ್ಲಿ ” ಸಿದ್ದು ಟ್ಯಾಕ್ಸ್ ” ಎಂದೇ ಲೋಕ ವಿಖ್ಯಾತಿಯಾಗುವ ಅಪಾಯ ಇದೆ. ಅಬಕಾರಿಯೊಂದನ್ನು ಹೊರತುಪಡಿಸಿ ಇನ್ಯಾವ ವಿಭಾಗದಲ್ಲೂ ತೆರಿಗೆ ಹೆಚ್ಚಳದ ಪ್ರಮಾಣ ನಮೂದಿಸಿಲ್ಲ. ಭವಿಷ್ಯದಲ್ಲಿ ನಾಗರಿಕರ ಜೇಬಿಗೆ ಕತ್ತರಿಯ ಬದಲು ಗರಗಸವನ್ನೇ ಹಾಕುವ ಸಾಧ್ಯತೆ ಹೆಚ್ಚಿದೆ.
ಒಟ್ಟಾರೆಯಾಗಿ ಸಿದ್ದರಾಮಯ್ಯನವರು ಬೆಳಕೇ ಇಲ್ಲದ ಕನಸು ಕಾಣುವುದಕ್ಕೂ ಅನರ್ಹವಾದ ಕತ್ತಲೆಯ ಹಾದಿಗೆ ರಾಜ್ಯದ ಜನರನ್ನು ಎಳೆದೊಯ್ಯುವ ಪ್ರಯತ್ನವನ್ನು ನಡೆಸಿದ್ದಾರೆ. “ಎಡವುವುದಕ್ಕಾಗಿಯೇ ನಡೆದರೆ ಒಪ್ಪುವರೇನಯ್ಯ ? ಎಂದು ಹೊಸ ಕವನದ ಸಾಲು ಸೇರಿಸಿದರೆ ಬಜೆಟ್ ನ ಮೆರಗು ಹೆಚ್ಚಬಹುದು ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.