ಕಾಣಿಯೂರು: ಪ್ರಸ್ತುತ ಎಲ್ಲೆಡೆ ಅಡಿಕೆ, ರಬ್ಬರ್ ಮುಂತಾದ ವಾಣಿಜ್ಯ ಬೆಳೆಗಳತ್ತ ಜನತೆ ಹೆಚ್ಚಿನ ಆಸಕ್ತಿ ಹೊಂದಿದ್ದು, ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಪರಿಣಾಮ ಮುಂದೊಂದು ದಿನ ಉಣ್ಣಲು ಅಕ್ಕಿಗೆ ಹಾಹಾಕಾರ ಪಡೆಯುವ ಕಾಲ ಬರಲೂಬಹುದು. ಈ ನಡುವೆ ಕಾಣಿಯೂರಿನ ಚಾರ್ವಾಕ ಗ್ರಾಮದ ಕುಕ್ಕೇನಾಥ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ಭಕ್ತರೇ ಭತ್ತದ ಬೇಸಾಯ ಮಾಡುವ ಮೂಲಕ ಪರಂಪರೆ ಉಳಿಸಿಕೊಂಡು ಬರುತ್ತಿದ್ದಾರೆ.
ಪ್ರತೀ ವರ್ಷ ಅಂದರೆ ಕಳೆದ 20 ವರ್ಷಗಳಿಂದ ಭಕ್ತರು ಶ್ರಮದಾನದ ಮೂಲಕ ವ್ಯವಸ್ಥಿತವಾಗಿ ಗದ್ದೆ ಬೇಸಾಯ ಮಾಡಿಕೊಂಡು ಬಂದು ಇತರರಿಗೆ ಮಾದರಿಯಾಗಿದ್ದಾರೆ.
2000 ನೇ ಇಸವಿಯಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದ ಬಳಿಕ ದೇವಸ್ಥಾನದ ಸಮೀಪದ ಗದ್ದೆಯೊಂದು ಬೇಸಾಯವಿಲ್ಲದೆ ನಶಿಸಿ ಹೋಗಿ ಪರಿಸರದಲ್ಲಿ ಬೆರಳೆಣಿಕೆ ಗದ್ದೆಗಳು ಮಾತ್ರ ಕಾಣಸಿಗುತ್ತಿತ್ತು. ಇದನ್ನು ಆ ಸಂದರ್ಭದಲ್ಲೇ ಮನಗಂಡು ಭತ್ತದ ಬೇಸಾಯದ ಮೂಲಕ ಪರಂಪರೆ ಉಳಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ.
ಮುಖ್ಯವಾಗಿ ತೆನೆ ಹಬ್ಬ(ಕೊರಲ್ ಪರ್ಬ)ದ ಕೊರಲ್ ಕಟ್ಟುವ ಉದ್ದೇಶಕ್ಕಾಗಿಯೇ ಬೇಸಾಯ ಮಾಡುತ್ತಾ ಬರಲಾಗಿದೆ. ಪ್ರತೀ ವರ್ಷ ಕ್ಲಪ್ತ ಸಮಯಕ್ಕೆ ಭತ್ತದ ಬಿತ್ತನೆ ಮಾಡಿ ನೇಜಿ ತಯಾರಿ ಮಾಡಲಾಗುತ್ತದೆ. ಜೂನ್ ತಿಂಗಳಲ್ಲೇ ನಾಟಿ ಮಾಡಲಾಗುತ್ತದೆ. ಅದು ಗಣೇಶ ಚೌತಿ ಸಂದರ್ಭಕ್ಕೆ ಪೈರಾಗಿ ಕೊರಲ್ ಹಬ್ಬಕ್ಕೆ ತಯಾರಾಗಬೇಕು ಎನ್ನುವ ಉದ್ದೇಶದಿಂದ ಜೂನ್ ತಿಂಗಳಲ್ಲೇ ನೇಜಿ ನಾಟಿ ಮಾಡಲಾಗುತ್ತದೆ. ಗಣೇಶ್ ಚೌತಿಯಂದು ಅರ್ಚಕರು ಗದ್ದೆಗೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ದೇವಸ್ಥಾನಕ್ಕೆ ಸಂಬಂಧಪಟ್ಟ 300 ಮನೆಯ ಭಕ್ತರು ಪೈರನ್ನು ಮನೆಗೆ ಕೊಂಡೊಯ್ದು ಮನೆತುಂಬಿಸುವ ಕಾರ್ಯವನ್ನು ಮಾಡುತ್ತಾರೆ. ದೇವಸ್ಥಾನದ ಪಂಗಡದ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಈ ಬಾರಿ ಬೇಸಾಯ ಕಾರ್ಯ ಯಶಸ್ವಿಯಾಗಿ ನಡೆಯಿತು. ಇಲ್ಲಿನ ಯುವಜನತೆ ಗದ್ದೆ ಬೇಸಾಯ ಸಂದರ್ಭದಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂತಸ ಸಂಭ್ರಮದಿಂದ ಶ್ರಮದಾನ ಮಾಡಿ ಖುಷಿಪಟ್ಟರು. ಈ ಭಾಗದ ಕೃಷಿಕ ಬಂಧುಗಳು ಒಂದೆರಡು ದಿನಗಳ ಕಾಲ ತಮ್ಮ ಎಲ್ಲಾ ಒತ್ತಡಗಳನ್ನು ಮರೆತು ಗದ್ದೆ ಬೇಸಾಯದಲ್ಲಿ ಭಾಗವಹಿಸಿ ಸಂತಸ ಹಂಚಿಕೊಂಡರು.
ಪ್ರಸ್ತುತ ದಿನಗಳಲ್ಲಿ ಗದ್ದೆ ಬೇಸಾಯಗಳು ಇಲ್ಲದೆ, ಕೊರಲ್ ಕಟ್ಟುವ, ಮನೆ ತುಂಬಿಸಿಕೊಳ್ಳುವ ಹಾಗೂ ಹೊಸಕ್ಕಿ ಊಟ(ಪುದ್ವಾರ್) ಮರೆಯಾಗುತ್ತಿವೆ, ಕಷ್ಟ ಕೊರಲ್ ಕಟ್ಟುವ ಕಾರ್ಯ ಕೂಡಾ ನಡೆಯುತ್ತಿಲ್ಲ, ಆದರೆ ಚಾರ್ವಾಕ ದೇವಸ್ಥಾನದ ಭಕ್ತರಿಗೆ ಇದ್ಯಾವುದೇ ಸಮಸ್ಯೆ ಇಲ್ಲ, ಕುಂಬ್ಲಾಡಿ ಎರಡನೇ ಬೈಲು ಮತ್ತು ಅರುವ, ಖಂಡಿಗಾ, ಮಾಚಿಲ, ಅಂಬುಲ, ಅರುವ, ಕಂಪ, ಕರಂದ್ಲಾಜೆ, ಅಗತ್ತಬೈಲು, ಗೌಡ ಮನೆ, ನಾಣಿಲ, ಉಳವ, ಕೊಪ್ಪ ಮುಂತಾದ ಬೈಲಿನ ಭಕ್ತರಿಗೆ ಇಲ್ಲಿ ಭರಪೂರ ಪೈರು ದೊರೆಯುತ್ತದೆ. ಇಲ್ಲಿನ ಭಕ್ತರಿಗೆ ಮಾತ್ರವಲ್ಲದೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರಿಗೆ ಕೂಡಾ ಇಲ್ಲಿಂದ ಪೈರು ಕೊಂಡೊಯ್ಯುತ್ತಾರೆ, ಮಾತ್ರವಲ್ಲ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪಂಜ, ಕೇರ್ಪಡ ಸೇರಿದಂತೆ ಹಲವಾರು ದೇವಸ್ಥಾನದವರೂ ದೇವಸ್ಥಾನದ ಮುಖ್ಯಸ್ಥರನ್ನು ಸಂಪರ್ಕಿಸಿ ಪೈರು ತೆಗೆದುಕೊಂಡು ಹೋಗುತ್ತಾರೆ. ಈ ಗದ್ದೆಯನ್ನು ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಅನ್ನಛತ್ರವಾಗಿಯೂ ಬಳಸಿಕೊಳ್ಳಲಾಗುತ್ತದೆ.
ದೇವಸ್ಥಾನದಲ್ಲಿ ಒಂದು ವರ್ಷದ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ನಾಲ್ಕು ಬೈಲಿನ ಸುಮಾರು ನೂರು ಮನೆಯ ಒಂದು ಪಂಗಡ ದಂತೆ ಮೂರು ಪಂಗಡವನ್ನು ಮಾಡಿಕೊಂಡು ದೇವಸ್ಥಾನದ ಜಾತ್ರೆಯಿಂದ ಹಿಡಿದು ಗದ್ದೆ ಬೇಸಾಯ, ಇತರ ಕೆಲಸಗಳನ್ನು ಒಂದು ವರ್ಷದ ಮಟ್ಟಿಗೆ ಒಂದು ಪಂಗಡಕ್ಕೆ ವಹಿಸಿಕೊಡಲಾಗುತ್ತದೆ. ಇಲ್ಲಿ ಜನವರಿಯಲ್ಲಿ ಜಾತ್ರೋತ್ಸವ ಮುಗಿಯುತ್ತದೆ, ಫೆಬ್ರವರಿಯ ಸಂಕ್ರಮಣದ ಬಳಿಕ ಮುಂದಿನ ಜನವರಿಯ ತನಕ ಇನ್ನೊಂದು ಪಂಗಡಕ್ಕೆ ಜವಾಬ್ದಾರಿಯನ್ನು ಹಂಚಲಾಗುತ್ತದೆ. ನಾಣಿಲ 1, ನಾಣಿಲ 2, ಉಳವ, ಕಂಪ ಕರಂದ್ಲಾಜೆ, ಮಿಯೋ ಬೈಲಿನವರು ಈ ಸಲದ ಆಡಳಿತ ಪಂಗಡದಲ್ಲಿ ಅಂಬುಲ, ಮಾಚಿಲ, ಅರುವ, ಕುಂಬ್ಲಾಡಿ ಒಂದನೇ ಬೈಲಿನವರು ಪಾಲ್ಗೊಂಡಿದ್ದು, ನೇಜಿ ನಾಟಿ ನಡೆಯಿತು.