ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಪರಿಣಾಮ ಭಾರಿ ಗಾಳಿ-ಮಳೆಗೆ ಬೃಹದಾದ ಜಾಹಿರಾತು ಫಲಕ ಬಿದ್ದು ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂ ಆಗಿರುವ ಘಟನೆ ಮಂಗಳೂರು ಬಿಕರ್ನಕಟ್ಟೆಯಲ್ಲಿ ನಡೆದಿದೆ.
ಕಮರ್ಷಿಯಲ್ ಬಿಲ್ಡಿಂಗ್ ಮೇಲೆ ಜಾಹಿರಾತು ಫಲಕ ಹಾಕಲಾಗಿತ್ತು. ಜೋರಾಗಿ ಬೀಸಿದ ಗಾಳಿಗೆ ಫಲಕ ಕಟ್ಟಡದ ಕೆಳಭಾಗಕ್ಕೆ ಬಿದ್ದಿದೆ. ಕಬ್ಬಿಣದ ಸರಳು ಹೊಂದಿರುವ ಫಲಕ ಕೆಳಗೆ ಹಾದು ಹೋದ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಭಾರ ತಾಳಲಾಗದೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ವಿದ್ಯುತ್ ಕಂಬದ ಜೊತೆ ವಿದ್ಯುತ್ ಪರಿವರ್ತಕ ಧರಾಶಾಹಿಯಾಗಿದೆ. ಕೆಳಗಿನ ರಸ್ತೆಯಲ್ಲಿ ಜನರಿಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಇನ್ನು ಈ ಘಟನೆ ಬಗ್ಗೆ ಸ್ಥಳೀಯರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಹಳೆಯ ಕಟ್ಟಡದ ಮೇಲೆ ಜಾಹಿರಾತು ಫಲಕ ಹಾಕಿದ್ದಾರೆ. ಮೂರು ಮೊಬೈಲ್ ಟವರ್ ಸಹ ಇದೆ. ಕಟ್ಟಡ ಹಳೆಯದಾಗಿ ಬಿರುಕು ಬಿಟ್ಟಿದೆ. ಮೊಬೈಲ್ ಟವರ್ ಸಹ ಬಿದ್ರೆ ಪ್ರಾಣ ಹಾನಿ ಉಂಟಾದ್ರೆ ಯಾರು ಜವಾಬ್ದಾರಿ? ದುರ್ಘಟನೆ ಸಂಭವಿಸುವ ಮೊದಲು ಕ್ರಮ ವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಕಟ್ಟಡದ ಮಾಲೀಕ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸಿಟ್ಟಿಗೆದ್ದ ಸ್ಥಳೀಯರು ಕೂಡಲೇ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಣದಾಸೆಗೆ ಬಿಲ್ಡಿಂಗ್ ಮೇಲೆ ಮೂರು ಮೂರು ಟವರ್ ಹಾಕಿದ್ದೀರಾ. ಮೊವೈಲ್ ಟವರ್ ಬಿದ್ದು ಜೀವ ಹಾನಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.