ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಮಂಗಳೂರು, ಉಳ್ಳಾಲ, ಮುಲ್ಕಿ, ಬಂಟ್ವಾಳ ಹಾಗೂ ಮೂಡಬಿದಿರೆ ತಾಲೂಕಿನ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.
ಇನ್ನುಳಿದ ಕಡೆಗಳಲ್ಲಿ ಅಲ್ಲಿ ಪ್ರಸ್ತುತ ಪರಿಸ್ಥಿತಿಗಳನ್ನು ನೋಡಿಕೊಂಡು ರಜೆ ಘೋಷಿಸುವ ಅಧಿಕಾರವನ್ನು ಆಯಾ ತಹಶೀಲ್ದಾರ್ಗಳಿಗೆ ನೀಡಲಾಗಿದೆ. ಶಾಲೆಯ ಮುಖ್ಯೋಪಾಧ್ಯರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ಶಾಲೆ ಹಾಗೂ ಕಾಲೇಜುಗಳ ಪರಿಸ್ಥಿತಿಗಳನ್ನು ನೋಡಿಕೊಂಡು ತಹಶೀಲ್ದಾರ್ ಗೆ ಮಾಹಿತಿಯನ್ನು ರವಾನಿಸಬೇಕು. ಈ ಮಾಹಿತಿಗಳನ್ನು ಅವಲೋಕನ ಮಾಡಿ ತಹಶೀಲ್ದಾರ್ ರಜೆ ಘೋಷಿಸುವ ಅಧಿಕಾರ ಹೊಂದಿರುತ್ತಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಗ್ರಾಮೀಣ ಭಾಗದಿಂದ ಅನೇಕರು ಶಾಲಾ – ಕಾಲೇಜುಗಳಿಗೆ ಆಗಮಿಸಬೇಕಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಐದು ತಾಲೂಕುಗಳ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.