ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಸಂಘ ಹಾಗೂ ಐಕ್ಯೂಎಸಿ ಇದರ ಸಹಯೋಗದಲ್ಲಿ ಸಿದ್ದಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ ’ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ ಇವರ ’ತಿರಿ’ ಎಂಬ ಕೃತಿ ಲೋಕಾರ್ಪಣೆ ಕಾರ್‍ಯಕ್ರಮವು ಜು.5 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್‍ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳೀಕೃಷ್ಣ ಕೆ.ಎನ್, ವಿಶ್ರಾಂತ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಭಾಗವಹಿಸಲಿದ್ದಾರೆ.
ಪ್ರಸ್ತುತ ಸಾಲಿನ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಟಾನ ಧರ್ಮಸ್ಥಳ ಇದರ ನಿರ್ದೆಶಕ ಡಾ. ವಿಘ್ನರಾಜ ಎಸ್.ಆರ್ ಅವರಿಗೆ ನೀಡಲಾಗುವುದು ಹಾಗೂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ಮನಮೋಹನ ಎಂ ಇವರ ತಿರಿ ಎಂಬ ಕೃತಿಯನ್ನು ಸರಕಾರಿ ಕಾಲೇಜು ಕಾಸರಗೋಡು ಇಲ್ಲಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಕಾರ್ಪಣೆಗೊಳಿಸಲಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ವಿಘ್ನರಾಜ ಎಸ್. ಆರ್ ಇವರು ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಧರ್ಮಸ್ಥಳದ ಇದರ ನಿರ್ದೇಶಕರು. ಕರ್ನಾಟಕದ ಸಂಸ್ಕೃತ ಜೈನ ಕವಿಗಳು ಇವರ ಪಿ.ಎಚ್.ಡಿ. ಮಹಾಪ್ರಬಂಧ. ತುಳುಲಿಪಿ ಹಸ್ತಪ್ರತಿಗಳ ಸೂಚಿ, ಭಾಗವತಾಂತರ್ಗತ ತುಳು ರಾಮಾಯಣ, ದಾನಶೂರ ಕರ್ಣಿ, ಸಂಗೀತ ವಿದ್ವಾಂಸ ಚಕ್ರಕೋಡಿ ನಾರಾಯಣ ಶಾಸ್ತ್ರೀ, ಸಂಸ್ಕೃತ ಹಸ್ತಪ್ರತಿಗಳ ಸೂಚಿ ಭಾಗ 1,2, ಪ್ರಾಚೀನ ಭಾರತೀಯ ಲಿಪಿಗಳು, ಜೈನಗ್ರಂಥಸ್ಥ ಹಾಡುಗಳು, ಮೊದಲಾದ ಕೃತಿಗಳನ್ನು ರಚಿಸುವುದರೊಂದಿಗೆ ಅನೇಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಇವರಿಗೆ ಉಂಡೆಮನೆ ಪ್ರಶಸ್ತಿ, ತುಳುವೆರೆ ಆಯನೋ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯಂತಹ ಅನೇಕ ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.