ಪುತ್ತೂರು : ಶಿಕ್ಷಕನಾದವನು ಗುರು ಸ್ಥಾನಕ್ಕೆ ಏರಬಹುದಾದ ಅವಕಾಶಗಳಿರುವುದು ಸತ್ಯ. ಬದುಕಿಗೆ ದಾರಿದೀಪವಾಗುವವರು ಗುರುಗಳೆನಿಸುತ್ತಾರೆ. ಹೆತ್ತವರ ನಂತರ ಮಕ್ಕಳ ಜವಾಬ್ದಾರಿಯನ್ನು ಹೊತ್ತು ಅವರ ಅಧ್ಯಯನದ ಕಾಲದಲ್ಲಿ ನಿರಂತರವಾಗಿ ಕಾಪಾಡುತ್ತಾ, ಬದುಕನ್ನು ರೂಪಿಸುತ್ತಾ ಸಾಗುವ ಮಹಾನ್ ವ್ಯಕ್ತಿತ್ವವೇ ಗುರು ಎಂದೆನಿಸಿಕೊಳ್ಳಲು ಸಾಧ್ಯ ಎಂದು ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು.
ಅವರು ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸೋಮವಾರ ಆಯೋಜಿಸಲಾದ ಗುರುಪೂರ್ಣಿಮಾ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹರ ಮುನಿದರೆ ಗುರು ಕಾಯುತ್ತಾನೆ. ಗುರುವೇ ಮುನಿದರೆ ಯಾರೂ ರಕ್ಷಿಸಲಾರರು ಎಂಬ ಮಾತು ಗುರುವಿನ ಯೋಗ್ಯತೆ, ಉತ್ಕೃಷ್ಟತೆಯನ್ನು ಅನಾವರಣಗೊಳಿಸುತ್ತದೆ. ಗುರು ಎಂದ ತಕ್ಷಣ ಸರ್ವ ಸಂಗತಿಗಳನ್ನೂ ನಿಯಂತ್ರಿಸಬಲ್ಲವ ಎಂದರ್ಥವಲ್ಲ. ಗುರುವಿಗೂ ಪರಿಧಿಯಿದೆ. ಆದರೆ ಗುರುಕಾರುಣ್ಯ ಮಾತ್ರ ಸೀಮಾತೀತವಾದದ್ದು. ಯಾರು ಗುರುವಿನ ಕರುಣೆಗೆ ಒಳಗಾಗುತ್ತಾರೋ ಅಂತಹವರು ಜೀವನದಲ್ಲಿ ಸಾಧನೆ ಮಾಡುತ್ತಾರೆ ಎಂದರು.
ವಿಶ್ರಾಂತ ಶಿಕ್ಷಕ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ಪುರಂದರ ಭಟ್ ಬಿ. ಮಾತನಾಡಿ ಗೌರವ ಸಮರ್ಪಣೆಯಾಗುವುದು ವ್ಯಕ್ತಿಗೇ ಆದರೂ ಅದು ಸಲ್ಲುವುದು ಗುರುವೆಂಬ ಶಕ್ತಿಗೆ. ಹಾಗಾಗಿ ಅಕಸ್ಮಾತ್ ಯಾರಾದರೂ ತನಗೆ ಸನ್ಮಾನ ಅಂದುಕೊಂಡರೆ ಅದು ವ್ಯಕ್ತಿಯ ಸೋಲೇ ಹೊರತು ಬೇರೇನೂ ಅಲ್ಲ. ಗುರು ಎಂಬ ಸ್ಥಾನದ ಮಹತ್ವ. ಗುರುಪರಂಪರೆಯನ್ನು ಗೌರವಿಸುವ, ಆದರಿಸುವ ಸಂಸ್ಕೃತಿ ನಮ್ಮದು ಎಂದು ಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ತನ್ನೆದುರು ಕುಳಿತಿರುವ ವಿದ್ಯಾರ್ಥಿಯಲ್ಲಿ ಭಗವಂತನನ್ನು ಕಾಣುವ ಪುರಂದರ ಭಟ್ಟರಂತಹ ಗುರುಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚಬೇಕು ಎಂದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶ್ರಾವ್ಯಾ ಪ್ರಾರ್ಥಿಸಿದರು. ಉಪನ್ಯಾಸಕಿ ಕಾವ್ಯಾ ಭಟ್ ಸ್ವಾಗತಿಸಿ, ಉಪನ್ಯಾಸಕಿ ಸುಚೇತಾರತ್ನ ವಂದಿಸಿದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.