ಬೆಂಗಳೂರು: ರಾಜ್ಯ ಸರಕಾರ ಬಿಪಿಎಲ್ ಕಾರ್ಡುದಾರರಿಗೆ ನೀಡುವ 5 ಕೆ.ಜಿ. ಅಕ್ಕಿ ಬದಲು ಹಣ ನೀಡುವ ಕುರಿತು ಈಗಾಗಲೇ ಘೋಷಣೆ ಮಾಡಿದ್ದು, ಹಣ ಹೇಗೆ ಕೊಡುವುದು ಎಂಬುದು ಅಧಿಕಾರಿಗಳಿಗೆ ಚಿಂತೆ ಶುರುವಾಗಿದೆ.
ಐದು ಕೆ.ಜಿ.ಅಕ್ಕಿ ಬದಲು 170 ರೂಪಾಯಿ ಓರ್ವ ಫಲಾನುಭವಿಗೆ ನೀಡಬೇಕು. ಒಂದು ಮನೆಯಲ್ಲಿ ನಾಲ್ಕು ಮಂದಿ ಇದ್ದರೆ 680 ರೂ. ಪ್ರತಿತಿಂಗಳು ವರ್ಗಾಯಿಸಬೇಕು. ಜು.1 ರಿಂದಲೇ ನೀಡಲು ನಿರ್ಧರಿಸಿದ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವುದು ಹೇಗೆ ಎಂಬುದು ಸಮಸ್ಯೆಯಾಗಿದೆ.
ಕಾರ್ಡುದಾರರ ಹೆಸರು, ಆಧಾರ್ ಸಂಖ್ಯೆ, ವಿಳಾಸ ಇತರ ವಿವರಗಳಿವೆ ಆದರೆ ಬ್ಯಾಂಕ್ ಮತ್ತು ಪ್ಯಾನ್ ಕಾರ್ಡ್ ವಿವರ ಇಲ್ಲ. ಇದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಕುರಿತು ಸರಕಾರ ಯಾವುದೇ ನಿರ್ದೇಶನ ನೀಡಿಲ್ಲ.
ಬಿಪಿಎಲ್ ಕಾರ್ಡ್ ಗಳು ಮತ್ತು ಖಾತೆ ಸಂಖ್ಯೆಗಳನ್ನು ಲಿಂಕ್ ಮಾಡುವುದು ದೊಡ್ಡ ಕೆಲಸವಾಗಿರುವುದರಿಂದ ಜುಲೈ ತಿಂಗಳಲ್ಲೇ ಫಲಾನುಭವಿಗಳಿಗೆ ಹಣ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಇಲ್ಲಿ ಒಂದು ಮಾರ್ಗ ಗೋಚರಿಸುತ್ತಿದ್ದು, ಅದೇನೆಂದರೆ ಕೇಂದ್ರ ಸರಕಾರದ ಜನ್ ಧನ್ ಬ್ಯಾಂಕ್ ಖಾತೆ ಇರುವವರ ಡೇಟಾ ಪಡೆದುಕೊಂಡು ಫಲಾನುಭವಿಗಳನ್ನು ಗುರುತಿಸಿ ಹಣ ಜಮೆ ಮಾಡುವ ಮಾರ್ಗವೊಂದಿದೆ. ಇದು ಅಂತರ್ ಇಲಾಖಾ ವಿಚಾರವಾಗಿರುವುದರಿಂದಬೇರೆ ಬೇರೆ ಇಲಾಖೆಗಳ ಜತೆ ಸಮನ್ವಯ ಸಾಧಿಸುವ ಅಗತ್ಯತೆ ಇರುವುದರಿಂದ ವಿಳಂಬವಾಗುವ ಸಾಧ್ಯತೆ ಜಾಸ್ತಿ ಕಾಣುತ್ತಿದೆ.